ಶಿವಮೊಗ್ಗ, ಆ 14 (DaijioworldNews/SM): ಸ್ವಾತಂತ್ರ್ಯ ಹೋರಾಟಗಾರರ ಗ್ಯಾಲರಿಯಿಂದ ವಿ.ಡಿ ಸಾವರ್ಕರ್ ಅವರ ಭಾವಚಿತ್ರವನ್ನು ತೆಗೆಯಲು ಕೆಲವು ಯುವಕರು ಶಾಪಿಂಗ್ ಮಾಲ್ ಸಿಬ್ಬಂದಿಯ ಮೇಲೆ ಒತ್ತಡ ಹೇರಿದ್ದ ಘಟನೆಯನ್ನು ಮಾಜಿ ಸಿಎಂ ಹಾಗೂ ಬಿಜೆಪಿ ನಾಯಕ ಬಿಎಸ್ ಯಡಿಯೂರಪ್ಪ ಖಂಡಿಸಿದ್ದಾರೆ.
ಕೆಲವು ಹಿಂದೂ ಕಾರ್ಯಕರ್ತರು ಬೆಂಗಳೂರಿನಲ್ಲಿ ಟಿಪ್ಪು ಸುಲ್ತಾನ್ ಪೋಸ್ಟರ್ ನ್ನು ತೆರವುಗೊಳಿಸಿದ್ದ ಘಟನೆಯ ಬಗ್ಗೆ ಮಾತನಾಡಲು ಯಡಿಯೂರಪ್ಪ ನಿರಾಕರಿಸಿದ್ದಾರೆ.
ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಸಾವರ್ಕರ್ ಅವರ ಭಾವಚಿತ್ರವನ್ನು ಒತ್ತಾಯಪೂರ್ವಕವಾಗಿ ತೆಗೆಸಿ ಅಕ್ಷಮ್ಯ ಅಪರಾಧವೆಸಗಿದ್ದಾರೆ. ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇಂತಹ ವ್ಯಕ್ತಿಗಳಿಗೆ ಶಿಕ್ಷೆ ನೀಡಿದರೆ, ಘಟನೆಗಳು ಮರುಕಳಿಸುವುದಿಲ್ಲ. ಸಾವರ್ಕರ್ ಅವರನ್ನು ಇಡೀ ಜಗತ್ತೇ ಕೊಂಡಾಡುತ್ತದೆ. ಆದರೆ ಈ ಘಟನೆಯಿಂದ ಎಲ್ಲರಿಗೂ ನೋವುಂಟಾಗಿದೆ. ಶಾಂತಿ ಕಾಪಾಡಲು ಜನತೆಯಲ್ಲಿ ಮನವಿ ಮಾಡುತ್ತೇನೆ, ಜನರು ಕಾನೂನನ್ನು ಕೈಗೆತ್ತಿಕೊಳ್ಳಬಾರದು ಎಂದರು.