ಶಿವಮೊಗ್ಗ, ಆ 14 (DaijiworldNews/DB): ನಮ್ಮ ಪ್ರವಾಸ ಆರಂಭವಾದ ಮೇಲೆ ಬಿಜೆಪಿಯ ಶಕ್ತಿ ಏನೆಂಬುದು ಕಾಂಗ್ರೆಸ್ ನಾಯಕರಿಗೆ ಅರಿವಾಗಲಿದೆ. ಸಿಎಂ ಆಗುವ ಅವರ ಕನಸು, ಆಸೆ ಈಡೇರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಒಟ್ಟಾಗಿ ಪ್ರವಾಸ ಮಾಡಲಿದ್ದೇವೆ. ಆ ಮೂಲಕ ಪಕ್ಷ ಸಂಘಟನೆ ಮಾಡಿ ಜನರಿಗೆ ನಮ್ಮ ಸಾಧನೆಗಳನ್ನು ತಿಳಿಸಲಿದ್ದೇವೆ. ಅಲ್ಲದೆ, ಜನೋತ್ಸವದ ಮೂಲಕವೂ ಸರ್ಕಾರದ ಸಾಧನೆಗಳನ್ನು ಜನಮನಕ್ಕೆ ತಲುಪಿಸುವ ಕೆಲಸ ನಡೆಯಲಿದೆ ಎಂದರು.
ಶಿವಮೊಗ್ಗದಲ್ಲಿ ವೀರ ಸಾವರ್ಕರ್ ಭಾವಚಿತ್ರದ ತೆರವಿಗೆ ಆಗ್ರಹದ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಾರ್ವರ್ಕರ್ ಅವರನ್ನು ಇಡೀ ವಿಶ್ವವೇ ಮೆಚ್ಚುತ್ತಿದೆ. ಆದರೆ ಕಿಡಿಗೇಡಿಗಳು ಅವರನ್ನು ಕೇವಲವಾಗಿ ಕಾಣುತ್ತಿದ್ದಾರೆ. ಅವರ ವರ್ತನೆ ಖಂಡನೀಯವಾಗಿದ್ದು, ಸರ್ಕಾರ ಅಂತಹವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಲಂಚ-ಮಂಚ ಹೇಳಿಕೆ ನೀಡಿರುವ ಪ್ರಿಯಾಂಕ್ ಖರ್ಗೆ ವಿರುದ್ದ ಸರ್ಕಾರ ಕಾನೂನು ಕ್ರಮ ಜರಗಿಸಬೇಕು. ಅವರ ಹೇಳಿಕೆ ಒಪ್ಪತಕ್ಕದ್ದಲ್ಲ. ಅಂತಹ ಹೇಳಿಕೆ ನೀಡುವುದು ಸರಿಯಲ್ಲ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.
ಸಂಸದ ಬಿ.ವೈ. ರಾಘವೇಂದ್ರ ಮಾತನಾಡಿ, ಸಾವರ್ಕರ್ ಭಾವಚಿತ್ರ ಕುರಿತು ಅನಗತ್ಯ ವಿವಾದ ಎಬ್ಬಿಸಲಾಗುತ್ತಿದೆ. ಅಂತಹ ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಮಾತನಾಡಲು ಇವರು ಯಾರು? ಅಶಾಂತಿ ಸೃಷ್ಟಿಸಲೆಂದೇ ಕಿಡಿಗೇಡಿಗಳು ಇಂತಹ ವಿವಾದಗಳನ್ನು ಎಬ್ಬಿಸುತ್ತಾರೆ. ಇಂತಹವರ ವಿರುದ್ದ ಕಠಿಣ ಕ್ರಮ ಅಗತ್ಯ ಎಂದು ಪ್ರತಿಪಾದಿಸಿದರು.
ಬೆಂಗಳೂರಿನಲ್ಲಿ ಟಿಪ್ಪು ಫ್ಲೆಕ್ಸ್ ಹರಿದು ಹಾಕಿರುವ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ಕೋಮು ಗಲಭೆ ಸೃಷ್ಟಿ ಮಾಡಲೆಂದೇ ಷಡ್ಯಂತ್ರ ಮಾಡಲಾಗುತ್ತಿದೆ. ಭಾವಚಿತ್ರ ಹರಿದು ವಿರೋಧ ವ್ಯಕ್ತಪಡಿಸುವುದು ಸರಿಯಲ್ಲ ಎಂದರು.