ಬೆಂಗಳೂರು, ಆ 14 (DaijiworldNews/DB): ಮಾಜಿ ಮೇಯರ್ ಶಹತಾಜ್ ಬೇಗಂ ಅವರು ಪತಿ ಮತ್ತು ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೀಡಿಯೊ ಸಂದೇಶ ಕಳುಹಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಕುತ್ತಿಗೆಗೆ ಸೀರೆಯಿಂದ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ಫೇಸ್ಬುಕ್ನಲ್ಲಿ ಅವರು ವೀಡಿಯೋ ಅಪ್ಲೋಡ್ ಮಾಡಿದ್ದಾರೆ. ಮೋದಿಯವರೇ ಒಂದೋ ನನಗೆ ರಕ್ಷಣೆ ನೀಡಿ, ಇಲ್ಲವಾದಲ್ಲಿ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾರೆ.
'ಪತಿ ಅನ್ವರ್ ಪಾಷಾ ಹಾಗೂ ಕೆ.ಆರ್. ಪುರ ಠಾಣೆ ಪೊಲೀಸರ ಕಿರುಕುಳದಿಂದ ಬೇಸತ್ತಿದ್ದೇನೆ. ಮದ್ಯ ವ್ಯಸನಿಯಾದ ಪತಿ ಅನ್ವರ್ ಪಾಷಾ ಹಲವು ಯುವತಿಯರೊಂದಿಗೆ ಸಂಬಂಧ ಹೊಂದಿದ್ದಾರೆ. ಆಸ್ತಿ ಮೇಲೆ ಸಾಲ ಮಾಡಿ ಬ್ಯಾಂಕ್ನಿಂದ ನೊಟೀಸ್ ಕೊಡಿಸಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದರು. ಇದಕ್ಕೂ ಮೊದಲು 2011ರಲ್ಲಿ ಪತ್ರಿಕೆಯೊಂದರಲ್ಲಿ ಜಾಹೀರಾತು ನೀಡಿ ತಲಾಖ್ ನೀಡಿದ್ದರು ಎಂದವರು ಹೇಳಿಕೊಂಡಿದ್ದಾರೆ.
ತಲಾಖ್ ಪ್ರಶ್ನಿಸಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಿದ್ದು, ನನ್ನ ಪರವಾಗಿಯೇ ತೀರ್ಪು ಬಂದಿತ್ತು. ಆದರೆ ಆ ಬಳಿಕವೂ ಕಿರುಕುಳ ಮುಂದುವರಿದಿದೆ. ಕೆ.ಆರ್. ಪುರ ಠಾಣೆಗೆ ದೂರು ನೀಡಿದರೆ ರಕ್ಷಣೆ ನೀಡಬೇಕಾದರೆ ಹಣ ನೀಡಬೇಕೆಂದು ಇನ್ಸ್ಪೆಕ್ಟರ್ ನಂದೀಶ್ ಹೇಳುತ್ತಾರೆ. ನೀನು ಮಾಜಿ, ಹೆಚ್ಚು ಮಾತನಾಡಬೇಡ ಎಂದು ಪಿಎಸ್ಐ ಅನಿತಾ ಹೇಳುತ್ತಾರೆ. ಪೊಲೀಸರೇ ಈ ರೀತಿ ಮಾಡಿದರೆ ನ್ಯಾಯ ಕೇಳಲು ಯಾರ ಬಳಿ ಹೋಗಬೇಕು ಎಂದು ಮಹಿಳೆ ಪ್ರಶ್ನಿಸಿದ್ದಾರೆ.