ಪುಣೆ, ಆ 13 (DaijiworldNews/DB): ಮನಸ್ಸುಗಳು ಒಂದಾದರೆ ಸಾಧನೆ ಸಾಧ್ಯ. ಕರ್ನಾಟಕ-ಮಹಾರಾಷ್ಟ್ರದ ಸಾಮರಸ್ಯ ಬೆಳೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆಶಿಸಿದ್ದಾರೆ.
ಪುಣೆಯಲ್ಲಿ ಬಂಟರ ಕನ್ನಡ ಸಂಘ ಆಯೋಜಿಸಿದ್ದ ಕನ್ನಡ ಭವನದ ನಾಲ್ಕನೇ ವಾರ್ಷಿಕೋತ್ಸವವ ಹಾಗೂ ಕಲ್ಪವೃಕ್ಷ ಶಕುಂತಲಾ ಜಗನ್ನಾಥ ಬಿ ಶೆಟ್ಟಿ ಅವರ ಸಮಾಜ ಕಲ್ಯಾಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಶನಿವಾರ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ನೆಲೆಸಿರುವ ಕನ್ನಡಿಗರು ಹೆಮ್ಮೆ ಪಡುವಂತಹ ಸಾಧನೆಗಳನ್ನು ಮಾಡಿದ್ದಾರೆ. ಶಿವಾಜಿ ಮಹಾರಾಜರ ಬಗ್ಗೆ, ಕನ್ನಡಿಗರ ಬಗ್ಗೆ ಗೌರವವಿರುವ ರಾಜ್ಯವಿದು. ಕನ್ನಡದ ಸಂಸ್ಕೃತಿ, ಭಾವನೆ, ಪರಂಪರೆಗಳ ಮೂಲಕ ಭಾಷೆಯ ಬೆಳವಣಿಗೆಯೂ ನಿರಂತರವಾಗಿ ಇರಲಿ ಎಂದರು.
ಆಜಾದಿ ಕಾ ಅಮೃತ ಮಹೋತ್ಸವದ ಅಂಗವಾಗಿ ನಡೆಯುತ್ತಿರುವ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಕರ್ನಾಟಕದಲ್ಲಿ 1 ಕೋಟಿ 25 ಲಕ್ಷ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಾಡುತ್ತಿದೆ. ದೇಶಭಕ್ತಿ ದೇಶದ ಉದ್ದಗಲದಲ್ಲಿಯೂ ಜಾಗೃತಿಯಾಗುತ್ತಿದೆ. ಇದರಿಂದ ದೇಶ ಕಟ್ಟಲು ಸಾಧ್ಯ. ದೇಶ ಮೊದಲು ಎಂಬ ಭಾವನೆ ಇರುವ ಜನರನ್ನು ಹೊಂದಿರುವ ದೇಶಕ್ಕೆ ಸೋಲೆಂಬುದೇ ಇರುವುದಿಲ್ಲ. 130 ಕೋಟಿ ದೇಶವಾಸಿಗಳು ಎದ್ದು ನಿಂತರೇ ಇಡೀ ಜಗತ್ತೇ ಅಲ್ಲಾಡಿಬಿಡುತ್ತದೆ ಎಂದವರು ಹೇಳಿದರು.
ಪುಣೆಯು ಸುಸಂಸ್ಕೃತ ಊರು. ಇಲ್ಲಿ ಬಂದು ಕನ್ನಡಿಗರು ಯಶಸ್ಸು ಸಾಧಿಸಿರುವುದು ಹೆಮ್ಮೆಯ ಸಂಗತಿ ಎಂದವರು ಇದೇ ವೇಳೆ ಶ್ಲಾಘಿಸಿದರು.