ಬೆಂಗಳೂರು, ಆ 13 (DaijiworldNews/DB): ನಾಲ್ಕು ದಶಕಗಳಿಂದ ಜಾಗತಿಕ ಮಟ್ಟದಲ್ಲಿ ಭಾರತದ ದನಿಯೇ ಇರಲಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದ ಬಳಿಕ ನಮ್ಮ ದೇಶದ ದನಿಗೆ ಮೌಲ್ಯ ಬಂದಿದೆ ಎಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಹೇಳಿದ್ದಾರೆ.
ರಾಮನಗರದ ಜೈನ್ ವಿವಿ ಆವರಣದಲ್ಲಿ ಶನಿವಾರ ನಡೆದ ಹರ್ ಘರ್ ತಿರಂಗಾ ಮತ್ತು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಅವರು ಮುಖ್ಯ ಅತಿಥಿಯಾಗಿದ್ದ ಅವರು, 40 ವರ್ಷಗಳ ಹಿಂದೆ ನಾನು ವಿದೇಶಾಂಗ ಸೇವೆಗೆ ಸೇರಿದ್ದೆ. ಆದರೆ ಆಗ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಸಿಗದ ಗೌರವ ಈಗ ಸಿಗುತ್ತಿದೆ. ಅದಕ್ಕೆ ಮೋದಿಯವರ ದಕ್ಷ ನಾಯಕತ್ವವೇ ಕಾರಣ ಎಂದರು.
ವಿದೇಶಾಂಗ ನೀತಿ ದೇಶದ ಜನರ ಬದುಕಿನ ದೃಷ್ಟಿಯಿಂದ ಅತಿ ಮುಖ್ಯ. ಭಾರತೀಯರ ಹಿತಾಸಕ್ತಿ, ರಾಷ್ಟ್ರೀಯ ಅಭಿವೃದ್ದಿ, ಜಾಗತಿಕ ಸಮಸ್ಯೆಗಳ ಬಗೆಗಿನ ನಮ್ಮ ನಿಲುವುಗಳು ಇದರಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತದೆ. ಭಾರತೀಯ ಯೋಗ ಪರಂಪರೆ, ಆಧ್ಯಾತ್ಮ, ಆಹಾರ ಪದ್ದತಿ, ಸಂಸ್ಕೃತಿಗಳಿಗೆ ವಿಶ್ವ ಮಟ್ಟದಲ್ಲಿ ಸಿಗುತ್ತಿರುವ ಮನ್ನಣೆ ದೇಶದ ಗೌರವವನ್ನು ಇನ್ನಷ್ಟು ಹೆಚ್ಚಿಸಿದೆ ಎಂದವರು ಅಭಿಪ್ರಾಯಪಟ್ಟರು.
ವಿಶ್ವದ ವಿವಿಧ ದೇಶಗಳಲ್ಲಿ ಸಂಕಷ್ಟದಲ್ಲಿದ್ದ 70 ಲಕ್ಷ ಭಾರತೀಯರನ್ನು ಸುರಕ್ಷಿತವಾಗಿ ತಾಯ್ನಾಡಿಗೆ ವಾಪಸ್ ಕರೆ ತಂದಿರುವುದು ಎಂಟು ವರ್ಷಗಳ ಸಾಧನೆಳಲ್ಲೊಂದು. ವಿದೇಶಗಳಲ್ಲಿ ಅಧ್ಯಯನನಿರತ 12 ಲಕ್ಷ ಭಾರತೀಯ ವಿದ್ಯಾರ್ಥಿಗಳ ಹಿತರಕ್ಷಣೆಯೂ ಸಾಧ್ಯವಾಗಿದೆ ಎಂದರು.