ನವದೆಹಲಿ, ಆ 13 (DaijiworldNews/DB): ಚೈನೀಸ್ ಮಾಂಜಾದಿಂದ ಕುತ್ತಿಗೆ ಸೀಳಿ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ನಡೆದಿದೆ.
ಮುಂಡ್ಕಾದ ರಾಜಧಾನಿ ಪಾರ್ಕ್ನ ನಿವಾಸಿ ವಿಪಿನ್ ಕುಮಾರ್ (34) ಮೃತ ವ್ಯಕ್ತಿ. ಈತ ರಕ್ಷಾ ಬಂಧನ ಆಚರಿಸಲೆಂದು ಗುರುವಾರ ತನ್ನ ಪತ್ನಿ ಹಾಗೂ ಮಗಳೊಂದಿಗೆ ಮೋಟಾರ್ ಸೈಕಲ್ನಲ್ಲಿ ಉತ್ತರ ಪ್ರದೇಶದ ಲೋನಿಯಲ್ಲಿರುವ ಅವರ ಅತ್ತೆಯ ಮನೆಗೆ ತೆರಳುತ್ತಿದ್ದಾಗ ಘಟನೆ ಸಂಭವಿಸಿದೆ. ಈಶಾನ್ಯ ದೆಹಲಿಯ ಶಾಸ್ತ್ರಿ ಪಾರ್ಕ್ ಪ್ರದೇಶದಲ್ಲಿ ಚೈನೀಸ್ ಮಾಂಜಾ ಎಂದು ಕರೆಯಲ್ಪಡುವ ಗಾಜಿನ ಹೊದಿಕೆಯ ಗಾಳಿಪಟದ ದಾರ ಕುತ್ತಿಗೆಗೆ ಸಿಲುಕಿಕೊಂಡಿತು. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಆ ವೇಳೆಗಾಗಲೇ ಸಾವನ್ನಪ್ಪಿದ್ದರು ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಪ್ರಾಣಿ-ಪಕ್ಷಿಗಳು ಮತ್ತು ಮನುಷ್ಯರ ಜೀವಕ್ಕೆ ಅಪಾಯ ಉಂಟು ಮಾಡಬಲ್ಲ ಗಾಳಿಪಟ ಹಾರಿಸಲು ಬಳಸುವ ಗಾಜಿನ ಪುಡಿ ಲೇಪಿತ 'ಮಾಂಜಾ' ದಾರ ಬಳಕೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್ಜಿಟಿ) 2017 ರಲ್ಲಿ ನಿಷೇಧ ಹೇರಿತ್ತು. ಆದಾಗ್ಯೂ ಇಲ್ಲಿ ಅದನ್ನು ಬಳಸಿರುವುದು ಕಂಡು ಬಂದಿದೆ. ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಕೈಗೆತ್ತಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.