ಶಿವಮೊಗ್ಗ, ಆ 13 (DaijiworldNews/HR): ಭಾರತ ಜೋಡೋ ಶಬ್ಧ ಬಳಸಲು ರಾಹುಲ್ ಗಾಂಧಿಗೆ ಯೋಗ್ಯತೆ ಇಲ್ಲ. ದೇಶವನ್ನು ಒಡೆದವರು ರಾಷ್ಟ್ರ ಭಕ್ತರೋ ಅಥವಾ ರಾಷ್ಟ್ರದ್ರೋಹಿಗಳೋ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಸ್ವಾತಂತ್ರ್ಯೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ಪಾದಯಾತ್ರೆ ಬಗ್ಗೆ ಕಿಡಿ ಕಾರಿರುವ ಅವರು, ಮೊದಲ ಪ್ರಧಾನಿ ಜವಹರ್ ಲಾಲ್ ನೆಹರು ಭಾರತವನ್ನು ಎರಡು ಭಾಗ ಮಾಡಿದರು. ಹೀಗಾಗಿ ನೆಹರು ಸಂತತಿ ಎಂದರೆ ಅದು ಜಿನ್ನಾ ಸಂತತಿ. ಈಗ ಅದೇ ಸಂತತಿಗೆ ಸೇರಿದ ರಾಹುಲ್ ಗಾಂಧಿಯಿಂದ ದೇಶಾದ್ಯಂತ ಜೋಡೋ ಪಾದಯಾತ್ರೆ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ರಾಷ್ಟ್ರಧ್ವಜದ ಬಣ್ಣ ಯಾವುದೆಂದೇ ಸಿದ್ದರಾಮಯ್ಯ ಅವರಿಗೆ ಗೊತ್ತಿಲ್ಲ. ರಾಷ್ಟ್ರಧ್ವಜದ ಬಣ್ಣ ಕೇಸರಿ ಬದಲು ಕೆಂಪು, ಬಿಳಿ, ಹಸಿರು ಎಂದು ಹೇಳಿಕೆ ನೀಡಿದ್ದಾರೆ. ಮಾಜಿ ಸಿಎಂ ಆಗಿದ್ದವರಿಗೆ ತಿರಂಗಾ ಬಣ್ಣದ ಬಗ್ಗೆ ಗೊತ್ತಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.