ಶ್ರೀನಗರ, ಆ 13 (DaijiworldNews/DB): ಭಯೋತ್ಪಾದಕ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಬಿಟ್ಟಾ ಕರಾಟೆ ಪತ್ನಿ ಸೇರಿ ನಾಲ್ವರನ್ನು ಜಮ್ಮು ಮತ್ತು ಕಾಶ್ಮೀರ ಆಡಳಿತವು ಸರ್ಕಾರಿ ಸೇವೆಯಿಂದ ವಜಾಗೊಳಿಸಿದೆ.
ಸಾಂದರ್ಭಿಕ ಚಿತ್ರ
ಬಿಟ್ಟಾ ಕರಾಟೆಯು ಕಾಶ್ಮೀರಿ ಪಂಡಿತರ ಹತ್ಯೆ ಪ್ರಕರಣದಲ್ಲಿ ಭಯೋತ್ಪಾದನಾ ಆರೋಪ ಎದುರಿಸುತ್ತಿದ್ದಾನೆ. ಪ್ರಸ್ತುತ ಆತ ಅಧಿಕಾರಿಗಳ ವಶದಲ್ಲಿದ್ದಾನೆ. ಇದೀಗ ಭಯೋತ್ಪಾದನಾ ಚಟುವಟಿಕೆಗಳಿಗೆ ಆರ್ಥಿಕ ಸಹಾಯ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆತನ ಪತ್ನಿ ಜಮ್ಮು ಮತ್ತು ಕಾಶ್ಮೀರ ಆಡಳಿತ ಸೇವೆಗಳ ಅಧಿಕಾರಿಯಾಗಿರುವ ಅಸ್ಸಾಬಾ-ಉಲ್-ಅರ್ಜಮಂಡ್ ಖಾನ್ ಅವರನ್ನು ಗ್ರಾಮೀಣಾಭಿವೃದ್ಧಿ ನಿರ್ದೇಶನಾಲಯದಲ್ಲಿ ನಿಯೋಜಿಸಲಾಗಿತ್ತು. ಇದೀಗ ಆಕೆಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ ಎಂದು ಸರ್ಕಾರಿ ಮೂಲಗಳು ತಿಳಿಸಿರುವುದಾಗಿ ವರದಿಯಾಗಿದೆ. ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ವಿಚಾರಣೆಯಿಲ್ಲದೆ ಸೇವೆಯಿಂದ ವಜಾಗೊಳಿಸಲು ಸಂವಿಧಾನದ 311 (2) (ಸಿ) ವಿಧಿಯ ಅಡಿಯಲ್ಲಿ ರಚಿಸಲಾದ ಗೊತ್ತುಪಡಿಸಿದ ಸಮಿತಿಯ ಶಿಫಾರಸಿನ ಆಧಾರದ ಮೇಲೆ ವಜಾ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ವಜಾಗೊಂಡಿರುವ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಮಾಹಿತಿ ಮತ್ತು ತಂತ್ರಜ್ಞಾನದ ವ್ಯವಸ್ಥಾಪಕ ಸೈಯದ್ ಅಬ್ದುಲ್ ಮುಯೀದ್ ಎಂಬಾತ ನಿಷೇಧಿತ ಉಗ್ರಗಾಮಿ ಸಂಘಟನೆ ಹಿಜ್ಬುಲ್ ಮುಜಾಹಿದ್ದೀನ್ನ ಪಾಕಿಸ್ತಾನ ಮೂಲದ ಮುಖ್ಯಸ್ಥ ಸೈಯದ್ ಸಲಾವುದ್ದೀನ್ನ ಪುತ್ರ. ವಜಾಗೊಂಡವರ ಪೈಕಿ ಇನ್ನೊಬ್ಬಾತ ಹುಸೇನ್ ಪಂಡಿತ್ ನಿಷೇಧಿತ ಜಮಾತ್-ಎ-ಇಸ್ಲಾಂ (JeI) ನೊಂದಿಗೆ ಸಕ್ರಿಯ ಸಂಬಂಧ ಹೊಂದಿದ್ದಾನೆ ಎನ್ನಲಾಗಿದೆ.