ಬೆಂಗಳೂರು, ಆ 13 (DaijiworldNews/MS):ಕೇಂದ್ರ ಸರ್ಕಾರ ಹರ್ ಘರ್ ತಿರಂಗಾ ಮೂಲಕ ರಾಷ್ಟ್ರಧ್ವಜಕ್ಕಿದ್ದ ಗೌರವವನ್ನು ಅದ್ವಾನ ಮಾಡಿದೆ. ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜಗಳನ್ನು ಮೀನು-ತರಕಾರಿ ಮಾರುವಂತೆ ಕಾಲಬುಡದಲ್ಲಿ ಇಟ್ಟುಕೊಂಡು ಮಾರಾಟ ಮಾಡಲಾಗುತ್ತಿದೆ. ಈ ರೀತಿ ರಾಷ್ಟ್ರಧ್ವಜವನ್ನು ಅಪಮಾನಿಸುವುದು ಯಾವ ಸೀಮೆಯ ದೇಶಭಕ್ತಿ ಎಂದು ಕಾಂಗ್ರೆಸ್ ಮುಖಂಡ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
ಈ ಬಗ್ಗೆ ವಿಚಾರದಲ್ಲಿ ಸರಣಿ ಟ್ವೀಟ್ ಮಾಡಿದ ಅವರು " ರಾಷ್ಟ್ರಧ್ವಜಕ್ಕೆ ತನ್ನದೇ ಆದ ಗೌರವವಿದೆ. ಧ್ಚಜ ಸಂಹಿತೆಯ ಪ್ರಕಾರ ರಾಷ್ಟ್ರಧ್ವಜದ ಮೂರು ಬಣ್ಣಗಳು ಸಮಾನವಾಗಿರಬೇಕು. 24 ಕಡ್ಡಿಗಳ ನೀಲಿ ಚಕ್ರ ಬಾವುಟದ ಮಧ್ಯದಲ್ಲಿರಬೇಕು. ಆದರೆ ಸರ್ಕಾರ ವಿತರಿಸಿರುವ ಬಾವುಟಗಳು ಮೂಲ ಸ್ವರೂಪ ಕಳೆದುಕೊಂಡು ಕುಲಗೆಟ್ಟು ಹೋಗಿವೆ. ಈ ಬಗ್ಗೆ ಸ್ವತಃ ಬಿಜೆಪಿಯವರೇ ಅಸಮಾಧಾನ ಹೊರಹಾಕಿದ್ದಾರೆ. 'ಹರ್ ಘರ್ ತಿರಂಗ' ಕೇಂದ್ರದ ನಕಲಿ ದೇಶಪ್ರೇಮದ ಅಸಹ್ಯ ಪ್ರದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಖಾದಿಯಿಂದ ತಯಾರಿಸುತ್ತಿದ್ದ ರಾಷ್ಟ್ರಧ್ವಜದ ಬದಲು ಪಾಲಿಸ್ಟರ್ ಬಟ್ಟೆಯಿಂದ ತಯಾರಿಸಿದ ಕಳಪೆ ರಾಷ್ಟ್ರಧ್ವಜಕ್ಕೆ ಅವಕಾಶ ನೀಡಲಾಗಿದೆ. ಬ್ರಿಟಿಷರ ವಿರುದ್ಧ ನಡೆದ 'ಅಸಹಕಾರ ಚಳವಳಿ'ಯಲ್ಲಿ ಖಾದಿಯ ಪಾತ್ರ ಅತ್ಯಂತ ದೊಡ್ಡದು.
ಆದರೆ ಕೇಂದ್ರ ಖಾದಿಯ ಬದಲು ಪಾಲಿಸ್ಟರ್ ಬಟ್ಟೆಯ ರಾಷ್ಟ್ರಧ್ವಜಕ್ಕೆ ಅವಕಾಶ ಕೊಟ್ಟಿರುವ ಹಿಂದಿನ ಹುನ್ನಾರವೇನು ಎಂದು ಪ್ರಶ್ನಿಸಿದ್ದಾರೆ
'ಮೇಕ್ ಇನ್ ಇಂಡಿಯಾ' ಎಂದು ಕಂತೆ ಪುರಾಣ ಹೊಡೆಯುವ ಮೋದಿಯವರು ಚೀನಾದಿಂದ ಪಾಲಿಸ್ಟರ್ ಬಟ್ಟೆ ತರಿಸಿ ರಾಷ್ಟ್ರಧ್ವಜ ತಯಾರಿಸಲು ಅವಕಾಶ ನೀಡಿದ್ದಾರೆ. ಇದು ಯಾರಿಗೆ ಅನುಕೂಲ ಮಾಡಿಕೊಡಲು? ಖಾದಿ ಉದ್ಯಮ ಸೊರಗುತ್ತಿರುವ ಈ ಸಂದರ್ಭದಲ್ಲಿ, ಖಾದಿ ಉದ್ಯಮವನ್ನು ಮೇಲೆತ್ತಲು ಸುವರ್ಣ ಅವಕಾಶವಿತ್ತು.ಆದರೆ ಸರ್ಕಾರವೇ ಖಾದಿ ಉದ್ಯಮದ ಕತ್ತು ಹಿಸುಕಿದೆ ಎಂದು ಆರೋಪಿಸಿದ್ದಾರೆ.
ಮೋದಿಯವರ ಆಡಳಿತ ವೈಫಲ್ಯದಿಂದ ದೇಶ ಇಂದು ಅನೇಕ ಸಮಸ್ಯೆಯಲ್ಲಿದೆ. ಈ ವೈಫಲ್ಯ ಮರೆಮಾಚುವ ಯತ್ನವೇ ಹರ್ ಘರ್ ತಿರಂಗ ಅಭಿಯಾನವೇ ಹೊರತು,ಇದರಲ್ಲಿ ದೇಶಪ್ರೇಮದ ಲವಲೇಶವೂ ಇಲ್ಲ. ತ್ರಿವರ್ಣ ಧ್ವಜವನ್ನುಅರೆಸ್ಸೆಸ್ ಯಾವತ್ತೂ ಒಪ್ಪಿರಲಿಲ್ಲ. ಆದರೆ ಆರೆಸ್ಸೆಸ್ ನ ರಾಜಕೀಯ ಮುಖವಾಣಿ ಬಿಜೆಪಿಯವರಿಗೆ ಇದ್ದಕಿದ್ದಂತೆ ತ್ರಿವರ್ಣ ಧ್ವಜದ ಮೇಲೆ ಪ್ರೇಮ ಹುಟ್ಟಲು ಕಾರಣವೇನು ಎಂದು ಕೇಳಿದ್ದಾರೆ.