ನವದೆಹಲಿ, ಆ 13 (DaijiworldNews/DB): ಕೇಂದ್ರದ ಹಣಕಾಸು ನೀತಿಯ ಬಗ್ಗೆ ಅನಗತ್ಯ ಮಾತನಾಡಿ ಜನರಲ್ಲಿ ಭಯ ಹುಟ್ಟಿಸುವ ಕೆಲಸವನ್ನು ದೆಹಲಿ ಸಿಎಂ ಅರವಿಂದ್ರ ಕೇಜ್ರೀವಾಲ್ ಅವರು ಮಾಡುತ್ತಿದ್ದಾರೆ ಎಂದು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಅನುರಾಗ್ ಠಾಕೂರ್ ಆಪಾದಿಸಿದ್ದಾರೆ.
ಈ ಕುರಿತು ಮಾತನಾಡಿರುವ ಅವರು, ದೆಹಲಿ ಸರ್ಕಾರದ ಆರೋಗ್ಯ ಸಚಿವರು, ಉಪ ಮುಖ್ಯಮಂತ್ರಿ ಭ್ರಷ್ಟಾಚಾರ ಆರೋಪವನ್ನು ಹೊತ್ತಿರುವುದರಿಂದ ಕೇಜ್ರೀವಾಲ್ ಅವರಿಗೆ ಹೇಳಲು ಏನೂ ಸಿಗುತ್ತಿಲ್ಲ. ಸಚಿವರ ವಿರುದ್ದ ಇರುವ ಭ್ರಷ್ಟಾಚಾರದ ಆರೋಪಗಳನ್ನು ಮರೆ ಮಾಚುವ ಉದ್ದೇಶ ಅವರದು. ಅದಕ್ಕಾಗಿ ಕೇಂದ್ರದ ಹಣಕಾಸು ನೀತಿಯ ವಿರುದ್ದ ಸುಖಾಸುಮ್ಮನೆ ಟೀಕೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಉಚಿತ ಯೋಜನೆಗಳನ್ನು ಘೋಷಣೆ ಮಾಡುವುದರಿಂದ ಭಾರತದ ಸ್ವಾವಲಂಬಿತನಕ್ಕೆ ದಕ್ಕೆಯಾಗುತ್ತದೆ. ತೆರಿಗೆದಾರರಿಗೂ ಇದು ಹೊರೆಯಾಗಿ ಪರಿಣಮಿಸುತ್ತಿದೆ ಎಂದು ಪ್ರಧಾನಿಯವರು ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಕೇಜ್ರೀವಾಲ್ , ತೆರಿಗೆದಾರರ ಹಣವನ್ನು ಜನರ ಏಳಿಗೆಗಾಗಿ ಖರ್ಚು ಮಾಡದಿದ್ದರೆ ಮೋಸವಾಗುತ್ತದೆ. ರಾಜಕಾರಣಿಗಳು ತಮ್ಮ ಸ್ವಂತಕ್ಕೆ, ಸ್ನೇಹಿತರಿಗಾಗಿ ಈ ದುಡ್ಡನ್ನು ವ್ಯಯಿಸದೆ ಮಕ್ಕಳ ಶಿಕ್ಷಣ, ವೈದ್ಯಕೀಯ ನೆರವಿಗಾಗಿ ಬಳಸಿಕೊಳ್ಳುವುದರಿಂದ ತಪ್ಪೇನಿಲ್ಲ ಎಂದು ಈ ಹಿಂದೆ ಹೇಳಿದ್ದರು.