ನವದೆಹಲಿ, ಆ 13 (DaijiworldNews/DB): ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಕರೆ ನೀಡಿರುವ ಹರ್ ಘರ್ ತಿರಂಗಾ ಅಭಿಯಾನಕ್ಕೆ ದೇಶವಾಸಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಇಂದು ಬೆಳಗ್ಗೆ ಜನಪ್ರತಿನಿಧಿಗಳು, ಜನರು ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿ ಸಂಭ್ರಮಿಸಿದರು.
ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಆಗಸ್ಟ್ 13ರಿಂದ 15ರವರೆಗೆ ಮನೆಮನೆಗಳಲ್ಲಿ ತಿರಂಗಾ ಹಾರಿಸುವಂತೆ ದೇಶದ ಜನರಿಗೆ ಪ್ರಧಾನಿ ನರೇಂದ್ರ ಮೋದಿಯವರು ಕರೆ ಕೊಟ್ಟಿದ್ದರು. ಹೀಗಾಗಿ ಪ್ರಧಾನಿ ಕರೆಗೆ ಸ್ಪಂದಿಸಿದ ದೇಶವಾಸಿಗಳು ತಮ್ಮ ತಮ್ಮ ಮನೆಗಳಲ್ಲಿ ಇಂದು ಬೆಳಗ್ಗೆಯೇ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿದರು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೆಹಲಿಯಲ್ಲಿರುವ ತಮ್ಮ ನಿವಾಸದಲ್ಲಿ ಪತ್ನಿಯೊಂದಿಗೆ ತ್ರಿವರ್ಣ ಧ್ವಜ ಹಾರಿಸಿದರು. ಉತ್ತರಾಖಂಡದಲ್ಲಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೋಲೀಸ್ ಸಿಬಂದಿ 14,000 ಅಡಿ ಎತ್ತರದಲ್ಲಿ ರಾಷ್ಟ್ರಧ್ವಜ ಹಾರಿಸಿ ದೇಶಪ್ರೇಮದ ಕಹಳೆ ಮೊಳಗಿಸಿದರು. ಕೇಂದ್ರದ ಹಲವು ನಾಯಕರು ತಮ್ಮ ತಮ್ಮ ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸುವ ಮೂಲಕ ಹರ್ ಘರ್ ತಿರಂಗಾ ಅಭಿಯಾನಕ್ಕೆ ಚಾಲನೆ ನೀಡಿದರು.
ಇನ್ನು ರಾಜ್ಯದ ನಾಯಕರು ಕೂಡಾ ಮನೆಗಳಲ್ಲಿ ಧ್ವಜ ಹಾರಿಸಿ ಅಭಿಯಾನಕ್ಕೆ ಕೈ ಜೋಡಿಸಿದರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬೆಂಗಳೂರಿನ ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸಿದರು. ಸಚಿವ ಮುರುಗೇಶ್ ನಿರಾಣಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿದಂತೆ ಅನೇಕ ನಾಯಕರು ಮನೆಗಳಲ್ಲಿ ರಾಷ್ಟ್ರಧ್ವಜ ಹಾರಿಸಿದರು.
ತ್ರಿವರ್ಣದ ರಂಗು
ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ಸಂಭ್ರಮ ಹೆಚ್ಚಿದೆ. ಈಗಾಗಲೇ ಸರ್ಕಾರಿ ಕಚೇರಿಗಳು, ಕೆಲವು ದೇವಸ್ಥಾನ, ಶಾಲೆ, ಆಸ್ಪತ್ರೆ ಕಟ್ಟಡಗಳಲ್ಲಿ ತ್ರಿವರ್ಣ ಶೋಭಿಸುತ್ತಿದೆ. ಕಟ್ಟಡಗಳನ್ನು ಕೇಸರಿ, ಬಿಳಿ, ಹಸಿರು ಬಣ್ಣಗಳ ಲೈಟಿಂಗ್ಸ್ ಮೂಲಕ ಅಲಂಕರಿಸಲಾಗಿದ್ದು, ತ್ರಿವರ್ಣ ರಂಗು ರಾಷ್ಟ್ರಪ್ರೇಮವನ್ನು ಇಮ್ಮಡಿಸುವಂತೆ ಶೋಭಿಸುತ್ತಿದೆ. ಕೆಲವು ರಸ್ತೆಗಳ ಇಕ್ಕೆಲಗಳಲ್ಲಿ, ಫ್ಲೈ ಓವರ್ಗಳಲ್ಲಿ, ಗಾರ್ಡನ್ಗಳಲ್ಲಿಯೂ ತ್ರಿವರ್ಣ ಲೈಟಿಂಗ್ಸ್, ಬಣ್ಣಗಳನ್ನು ಬಳಿಯಲಾಗಿದ್ದು, ಆಕರ್ಷಣೆಯ ಕೇಂದ್ರ ಬಿಂದುವಾಗಿ ಕಾಣುತ್ತಿದೆ.