ಬೆಂಗಳೂರು, ಆ 13 (DaijiworldNews/DB): ಕರ್ನಾಟಕ ಏರೋಸ್ಪೇಸ್ ಮತ್ತು ಡಿಫೆನ್ಸ್ ನೀತಿ 2022-27ಕ್ಕೆ ಶುಕ್ರವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಸಿಕ್ಕಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಅನುಮೋದನೆ ನೀಡಲಾಗಿದೆ.
ಇದೇ ವೇಳೆ ಕರ್ನಾಟಕ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ( ತಿದ್ದುಪಡಿ ನಿಯಮಗಳು 2022ಕ್ಕೆ ಸಹ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಆವರಣದಲ್ಲಿ 90 ಕೋಟಿ ರೂ. ಅಂದಾಜು ವೆಚ್ಚದಲ್ಲಿ ನೂತನ ಅಭಿವೃದ್ಧಿ ಭವನ ನಿರ್ಮಾಣ ಮಾಡಲು ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಈ ಎಲ್ಲಾ ಅಂಶಗಳನ್ನು ಮುಖ್ಯಮಂತ್ರಿಗಳ ಟ್ವೀಟರ್ ಖಾತೆಯಲ್ಲಿ ಪ್ರಕಟಿಸಲಾಗಿದೆ.
ಇದರೊಂದಿಗೆ ರಾಜ್ಯ ಜಲ ನೀತಿ 2022ಕ್ಕೆ ಕೂಡಾ ಸಂಪುಟದಲ್ಲಿ ಅನುಮೋದನೆ ದೊರೆತಿದೆ. ಆಂಧ್ರಪ್ರದೇಶದ ಶ್ರೀ ಶೈಲವು ಪ್ರಸಿದ್ದ ಯಾತ್ರಾ ಸ್ಥಳವಾಗಿ ಖ್ಯಾತಿ ಪಡೆದಿರುವುದರಿಂದ ಮತ್ತು ಅಲ್ಲಿ ರಾಜ್ಯದ ಹಲವರು ಯಾತ್ರೆಗೆ ತೆರಳುವುದರಿಂದ ಯಾತ್ರಿ ನಿವಾಸ ಸಂಕೀರ್ಣ ಕಟ್ಟಡ ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ. ಅದಕ್ಕಾಗಿ 85 ಕೋಟಿ ರೂ. ಅಂದಾಜು ವೆಚ್ಚದಲ್ಲಿ ಯಾತ್ರಿ ನಿವಾಸ ನಿರ್ಮಾಣಕ್ಕಾಗಿ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದು ಮಾಹಿತಿ ನೀಡಲಾಗಿದೆ.