ಪಣಜಿ, ಆ 12 (DaijiworldNews/DB): ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದ ಹಲವು ಹೋರಾಟಗಾರರು ಆಗ್ವಾದ್ ಜೈಲಿನಲ್ಲಿ ಬಂಧಿಯಾಗಿದ್ದರು. ಅವರ ಹೋರಾಟವನ್ನು ಯುವ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ಅಲ್ಲಿ ವಸ್ತು ಪ್ರದರ್ಶನ ಏರ್ಪಡಿಸಲಾಗಿದ್ದು, ವರ್ಷವಿಡೀ ವಿದ್ಯಾರ್ಥಿಗಳಿಗಾಗಿ ಜೈಲ್ ಮ್ಯೂಸಿಯಂನ್ನು ತೆರೆದಿಡಲಾಗುವುದು ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ.
ಆಜಾದಿ ಕಾ ಅಮೃತ ಮಹೋತ್ಸವ ನಿಮಿತ್ತ ಸಿಕೇರಿಯ ಕೋಟೆ ಅಗವಾಡ ಜೈಲಿನಲ್ಲಿ ಆಯೋಜಿಸಿದ್ದ ಧ್ವಜಾರೋಹಣ ಹಾಗೂ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಮಾತನಾಡಿದ ಅವರು, ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಈ ವಸ್ತು ಪ್ರದರ್ಶನ ನಡೆಯಲಿದೆ. ಹುತಾತ್ಮ ಸ್ವಾತಂತ್ರ್ಯ ಹೋರಾಟಗಾರರಿಗೆ ಶ್ರದ್ದಾಂಜಲಿ ಸಲ್ಲಿಸುವ ಮೂಲಕ ಜೈಲಿನ ಪರಂಪರೆ ಮತ್ತು ಹೋರಾಟ ಸಾರುವ ಮ್ಯೂಸಿಯಂನ್ನು ಸೆ.1ರಂದು ಉದ್ಘಾಟಿಸಲಾಗುವುದು ಎಂದರು.
ಪೋರ್ಚುಗೀಸರು 450 ವರ್ಷಗಳ ಕಾಲ ಗೋವಾವನ್ನು ಲೂಟಿಗೈದರು ಎಂಬ ಅಂಶವನ್ನು ನಿರ್ಲಕ್ಷಿಸುವಂತಿಲ್ಲ ಎಂದವರು ಇದೇ ವೇಳೆ ತಿಳಿಸಿದರು.
ಅಮೃತ ಮಹೋತ್ಸವದ ಸಂದರ್ಭದಲ್ಲಿ ಕೆಲವು ನಿರ್ಣಯಗಳನ್ನು ಸರ್ಕಾರ ಕೈಗೊಂಡಿದೆ. ಮುಂದಿನ ಎರಡೂವರೆ ದಶಕ ಕಾಲ 75 ಹೊಸ ಆಲೋಚನೆಗಳನ್ನು ದೇಶಕ್ಕಾಗಿ ಯುವಕರು ಪ್ರಸ್ತುತಪಡಿಸಬೇಕು. ಈ ದೇಶಕ್ಕಾಗಿ ಜೀವ ನೀಡುವ ಅಗತ್ಯವಿಲ್ಲ, ಆಲೋಚನೆಗಳನ್ನು ನೀಡುವ ಅವಶ್ಯಕತೆ ಇದೆ ಎಂದವರು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿದರು.