ಬೆಂಗಳೂರು, ಆ 12 (DaijiworldNews/HR): ಬಿಜೆಪಿಯ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಸಚಿವ ಬಿ.ಎ ಬಸವರಾಜ ಅವರು ತಮ್ಮ ಅಂಗಿಯ ಜೇಬಿನ ಮೇಲೆ ತಲೆ ಕೆಳಗಾಗಿ ರಾಷ್ಟ್ರಧ್ವಜ ಧರಿಸಿರೋ ಪೋಟೋ ವೈರಲ್ ಆಗಿದ್ದು, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಬಿಜೆಪಿ ನಕಲಿ ದೇಶಭಕ್ತರಿಗೆ ರಾಷ್ಟ್ರಧ್ವಜದ ಘನತೆಯೂ ತಿಳಿದಿಲ್ಲ, ದೇಶದ ಗೌರವವೂ ತಿಳಿದಿಲ್ಲ. ಎಷ್ಟಾದರೂ ಗೋಡ್ಸೆ ಭಕ್ತರಲ್ಲವೇ, ಭಗವಾಧ್ವಜದ ಆರಾಧಕರಲ್ಲವೇ, ಸಂವಿಧಾನ ವಿರೋಧಿಗಳಲ್ಲವೇ, ಮನದೊಳಗೆ ಸಂಘದ ಪಾಠವಾದ ತಿರಂಗಾ ದ್ವೇಷ ಇಟ್ಟುಕೊಂಡಿರುವ ನಳೀನ್ ಕುಮಾರ್ ಕಟೀಲ್ ಅವರಿಗೆ ಧ್ವಜ ತಲೆಕೆಳಗಾಗಿಸುವುದೇ ಮೂಲ ಅಜೆಂಡಾ ಇರುವಂತಿದೆ ಎಂಬುದಾಗಿ ವಾಗ್ಧಾಳಿ ನಡೆಸಿದೆ.
ರಾಷ್ಟ್ರಧ್ವಜ ಮಾರಾಟದ ಸರಕಾದಾಗ ಅದರ ಗುಣಮಟ್ಟ ಕಳೆದುಹೋಗುತ್ತವೆ, ವ್ಯಾಪಾರವೇ ಮುಖ್ಯವಾದಾಗ ಶ್ರದ್ಧೆ, ಭಕ್ತಿಗಳು ಕಳೆದುಹೋಗುತ್ತದೆ. ಮೊಟ್ಟೆಯಾಕಾರದ ಚಕ್ರ, ನಿಯಮವಿಲ್ಲದ ರಚನೆ, ಆಕಾರವಿಲ್ಲದ ಧ್ವಜ, ಹರಿದ, ಬಣ್ಣಗೆಟ್ಟ ರಾಷ್ಟ್ರಧ್ವಜ ಇವುಗಳಿಗೆ ಹೊಣೆ ಯಾರು, ಈ ಅಪಸಾವ್ಯಗಳಿಗೆ ಶಿಕ್ಷೆ ಯಾರಿಗೆ ಎಂದು ಪ್ರಶ್ನಿಸಿದೆ.