ಮೈಸೂರು, ಆ 12 (DaijiworldNews/DB): ಚಿತ್ರ ನಟ ಯಶ್ ಯುವಜನೋತ್ಸವಕ್ಕೆ ಬಾರದೇ ಇರುತ್ತಿದ್ದರೆ ಬಿಜೆಪಿ ನಾಯಕರಿಗೆ ಕಲ್ಲೇಟು ಬೀಳುತಿತ್ತು ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಹೇಳಿದ್ಗಾರೆ.
ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ಅವರು, ಯುವಕರಿಗೆ ಉದ್ಯೋಗ ಸೃಷ್ಟಿಸದ ಬಿಜೆಪಿ ಸರ್ಕಾರ ಯುವ ಜನೋತ್ಸವ ಮಾಡಿದೆ. ಯುವಕರ ಸಮಸ್ಯೆಗಳನ್ನು ಬಗೆ ಹರಿಸುವುದಾಗಲೀ, ವಿದ್ಯಾರ್ಥೀವೇತನವನ್ನು ಸಮರ್ಪಕವಾಗಿ ವಿತರಿಸುವುದಾಗಲೀ ಈ ಸರ್ಕಾರ ಮಾಡುತ್ತಿಲ್ಲ. ಈ ಬಗ್ಗೆ ಯುವಕರಿಗೆ ಸಾಕಷ್ಟು ಅಸಮಾಧಾನ ಸರ್ಕಾರದ ಮೇಲಿದೆ. ಯುವಜನೋತ್ಸವಕ್ಕೆ ಯಶ್ ಬಾರದೇ ಇರುತ್ತಿದ್ದರೆ ಆ ಪಕ್ಷದ ನಾಯಕರಿಗೆ ಕಲ್ಲೇಟು ಬೀಳುತ್ತಿತ್ತು ಎಂದರು.
ಬಿಜೆಪಿಯು ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದು ದುರದೃಷ್ಟಕರ. ಗಾಂಧಿ- ನೆಹರೂ- ಅಂಬೇಡ್ಕರ್ ಭಾವಚಿತ್ರಗಳನ್ನು ಎಲ್ಲಿಯೂ ಬಳಕೆ ಮಾಡಿಲ್ಲ. ಅಲ್ಲದೆ, ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ಕೆಲಸವನ್ನೂ ಮಾಡಿಲ್ಲ ಎಂದವರು ಇದೇ ವೇಳೆ ಆಪಾದಿಸಿದರು.
ವಿ.ಡಿ. ಸಾವರ್ಕರ್, ಆರೆಸ್ಸೆಸ್ನ ಗೋಳ್ವಲ್ಕರ್ ಮುಂತಾದವರು ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿಲ್ಲ. ಆದರೆ ಬಿಜೆಪಿ ಸರ್ಕಾರವು ಹರ್ಘರ್ ತಿರಂಗಾ ಅಭಿಯಾನದ ಮೂಲಕ ಜನರಿಂದ ವಸೂಲು ಮಾಡಲು ಹೊರಟಿದೆ ಎಂದು ಆರೋಪಿಸಿದರು.
ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಮುಂದುವರಿಯುತ್ತಾರೆಂದು ಹೇಳುತ್ತಲೇ ಬಂದಿದ್ದ ಬಿಜೆಪಿಗರು ಅವರನ್ನು ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಿದರು. ಈಗ ಅವರನ್ನೂ ಬದಲಾಯಿಸಿ ಅಧಿಕಾರಕ್ಕೇರುವ ಕನಸು ಕಾಣುತ್ತಿದ್ದಾರೆಂದು ವ್ಯಂಗ್ಯವಾಡಿದರು.