ಬೆಂಗಳೂರು, ಆ 12 (DaijiworldNews/MS): ರಾಜ್ಯದಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ರಾಜ್ಯ ಸರ್ಕಾರದ ಕೈಗೊಂಡ ಕ್ರಮಗಳ ಕುರಿತು ಪ್ರಶ್ನೆ ಮಾಡಿರುವ ಕಾಂಗ್ರೆಸ್ , ನೆರೆ ವಿಚಾರ ಬಂದರೆ ಸಚಿವರೆಲ್ಲರೂ ಬಿಲ ಸೇರುತ್ತಾರೆ ಎಂದು ಕುಹಕವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ ರಾಜ್ಯ ಘಟಕ, ರಾಜಕೀಯ ಹೇಳಿಕೆ ನೀಡಬೇಕೆಂದರೆ ಎಲ್ಲೆಲ್ಲೋ ಬಿಲದಲ್ಲಿ ಅಡಗಿದ ಸಚಿವರೆಲ್ಲರೂ ಎದ್ದು ಓಡೋಡಿ ಬರುತ್ತಾರೆ, ನೆರೆ ವಿಚಾರ ಬಂದರೆ ಬಿಲ ಸೇರುತ್ತಾರೆ!ಸಚಿವರು ತಮ್ಮ ಉಸ್ತುವಾರಿ ಜಿಲ್ಲೆಗಳ ನೆರೆ ಹಾನಿಯ ಬಗ್ಗೆ ಕೈಗೊಂಡ ಕ್ರಮಗಳೇನು ಎಂದು ಕೇಳಿದರೆ ಮೌನಕ್ಕೆ ಜಾರುತ್ತಾರೆ. ಇದು ಬಿಜೆಪಿ ಸರ್ಕಾರದ ಕಾರ್ಯವೈಖರಿ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ರಾಜ್ಯದ ರೈತರನ್ನು ಮಳೆ ಮುಳುಗಿಸಿಲ್ಲ, ಬಿಜೆಪಿ ಸರ್ಕಾರವೇ ಅನ್ಯಾಯವೆಸಗಿ ಮುಳುಗಿಸುತ್ತಿದೆ.ನೆರೆಯಿಂದ ಆದ ಬೆಳೆ ನಷ್ಟವನ್ನು ಇದುವರೆಗೂ ಸರ್ಕಾರ ಸರ್ವೆ ನಡೆಸಿಲ್ಲ, ಪರಿಹಾರವೂ ಘೋಷಿಸಿಲ್ಲ.ನೆರೆಯಿಂದ ಸಂತ್ರಸ್ತರಾದವರಿಗೆ ಕೈಗೊಂಡ ತುರ್ತು ಪರಿಹಾರ ಕ್ರಮಗಳೇನು ಎಂದು ಸರ್ಕಾರ ಹೇಳಲಿ ಎಂದು ಪ್ರಶ್ನಿಸಿದೆ.
ರಾಜ್ಯದಲ್ಲಿ ಕಳೆದ ಮೂರು ವರ್ಷಗಳಿಂದ ಮಳೆ ಅವಾಂತರ ಸೃಷ್ಟಿಸುತ್ತಲೇ ಇದ್ದು ಕೋಟ್ಯಂತರ ಮೌಲ್ಯದ ಆಸ್ತಿ, ಬೆಳೆ ಹಾಗು ಜೀವ ಹಾನಿಗೆ ಸಾಕ್ಷಿಯಾಗುತ್ತಲೇ ಇದೆ. ಈ ವರ್ಷವೂ ಮಳೆ ತನ್ನ ಆರ್ಭಟವನ್ನು ಮುಂದುವರಿಸಿದ್ದು ಅತಿವೃಷ್ಟಿಯ ಪರಿಣಾಮ ರೈತರು ಸೇರಿ ಹಲವರು ತೊಂದರೆ ಅನುಭವಿಸುತ್ತಿದ್ದಾರೆ.