ಕಲಬುರ್ಗಿ, ಆ 12 (DaijiworldNews/DB): ರಾಜ್ಯ ಸರ್ಕಾರದ ಭ್ರಷ್ಟಾಚಾರ ಮಿತಿ ಮೀರಿದೆ. ವಿಧಾನಸೌಧವನ್ನು ಬ್ರೋಕರ್ ಗಳು ವ್ಯಾಪಾರ ಸೌಧವನ್ನಾಗಿ ಮಾಡಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಪ್ರಿಯಾಂಕ್ ಖರ್ಗೆ ಆಪಾದಿಸಿದ್ದಾರೆ.
ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉದ್ಯೋಗ ಬೇಕೆಂದರೆ ಯುವಕರು ಲಂಚ ಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. 40% ನೀಡಿದರೆ ಯಾವುದೇ ಅಕ್ರಮಕ್ಕೂ ಈ ಸರ್ಕಾರದಲ್ಲಿ ಅವಕಾಶ ಇದೆ ಎಂಬುದು ಈಗಾಗಲೇ ಸಾಬೀತಾಗಿದೆ. ಬ್ರೋಕರ್ಗಳು ವಿಧಾನಸೌಧವನ್ನು ವ್ಯಾಪಾರ ಸೌಧವನ್ನಾಗಿ ಮಾಡಿದ್ದಾರೆ. 40% ಕೊಟ್ಟರೆ ವಿಧಾನಸೌಧವನ್ನೇ ಮಾರಿ ಬಿಡುವಲ್ಲಿವರೆಗೆ ಅವರು ಬೆಳೆದಿದ್ದಾರೆ ಎಂದು ಅವರು ವಾಗ್ದಾಳಿ ನಡೆಸಿದರು.
ಸರ್ಕಾರ ಅಸಮರ್ಥವಾಗಿದೆ ಎಂದು ಸಾಬೀತಾಗಿದೆ. ಉದ್ಯೋಗ ಮೇಳ ಮಾಡಿ ಯುವಕರಿಗೆ ಉದ್ಯೋಗ ಕಲ್ಪಿಸಲು ಈ ಸರ್ಕಾರ ಮುಂದಾಗುತ್ತಿಲ್ಲ. ಒಟ್ಟಾರೆ ಸರ್ಕಾರದ ಮೇಲೆ ಯುವಕರು ಭರವಸೆ ಕಳೆದುಕೊಂಡಿದ್ದಾರೆ ಎಂದರು.
ಪಿಎಸ್ಐ ಅಕ್ರಮ ನೇಮಕಾತಿ ಹಗರಣದ ತನಿಖೆ ಇನ್ನೂ ಅಂತಿಮಗೊಂಡಿಲ್ಲ. ಕೋರ್ಟ್ ಮೂಲಕ ಹಾಲಿ ನ್ಯಾಯಾಧೀಶರಿಂದ ಹಗರಣದ ತನಿಖೆಯಾಗಲಿ ಎಂದು ಇದೇ ವೇಳೆ ಅವರು ಆಗ್ರಹಿಸಿದರು.