ಬೆಂಗಳೂರು, ಆ 12 (DaijiworldNews/DB): ತಂದೆ ಜತೆ ಬೈಕ್ನಲ್ಲಿ ಹೋಗುತ್ತಿದ್ದ ಬಾಲಕ ಆಯ ತಪ್ಪಿ ರಸ್ತೆಗೆ ಬಿದ್ದ ಪರಿಣಾಮ ಹಿಂದಿನಿಂದ ಬರುತ್ತಿದ್ದ ಸೇನೆಗೆ ಸೇರಿದ ವಾಹನ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಂಗಳೂರಿನ ಕೆ.ಆರ್. ಪುರ ಹೊಸಕೋಟೆ ರಸ್ತೆಯಲ್ಲಿ ಗುರುವಾರ ರಾತ್ರಿ ನಡೆದಿದೆ.
ಮೃತ ಬಾಲಕನನ್ನು ಜೀವನ್ (10) ಎಂದು ಗುರುತಿಸಲಾಗಿದೆ. ಹೆಡ್ಕಾನ್ಸ್ಟೇಬಲ್ ಆಗಿರುವ ತಂದೆ ಸಂತೋಷ್ ಅವರೊಂದಿಗೆ ಬೈಕ್ನ ಹಿಂಬದಿಯಲ್ಲಿ ಕುಳಿತು ಬಾಲಕ ಕೆ.ಆರ್. ಪುರ ಮಾರ್ಕೆಟ್ಗೆ ತೆರಳುತ್ತಿದ್ದ. ಕೆ.ಆರ್. ಪುರ ತೂಗು ಸೇತುವೆ ಇಳಿದ ಕೂಡಲೇ ರಸ್ತೆಗುಂಡಿ ಎದುರಾಗಿದ್ದರಿಂದ ಬೈಕ್ನ್ನು ಬದಿಗೆ ತಿರುಗಿಸಿದಾಗ ಜಲ್ಲಿ ಪುಡಿಯಿಂದಾಗಿ ಬೈಕ್ ಜಾರಿದೆ. ಈ ವೇಳೆ ಹಿಂಬದಿ ಕುಳಿತಿದ್ದ ಬಾಲಕ ಜೀವನ ಆಯತಪ್ಪಿ ರಸ್ತೆಗೆ ಬಿದ್ದಿದ್ದು, ಇದೇ ವೇಳೆ ಹಿಂಬದಿಯಿಂದ ಬರುತ್ತಿದ್ದ ಸೇನೆಗೆ ಸೇರಿದ ವಾಹನ ಬಾಲಕನ ಮೇಲೆ ಹರಿದಿದೆ. ಇದರಿಂದಾಗಿ ತಂದೆಯ ಎದುರೇ ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಕೆ.ಆರ್. ಪುರ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ತಂದೆ ಸಂತೋಷ್ ವಾರದ ಹಿಂದಷ್ಟೇ ಬೇರೆ ಠಾಣೆಗೆ ವರ್ಗಾವಣೆಯಾಗಿದ್ದರು. ರಸ್ತೆಯಲ್ಲಿನ ಅವ್ಯವಸ್ಥೆಯೇ ಬಾಲಕನ ಸಾವಿಗೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಗುಂಡಿ ಸೃಷ್ಟಿಯಾಗಿ ತೀರಾ ಹದಗೆಟ್ಟಿತ್ತು. ಪುಡಿ ಜಲ್ಲಿಯೂ ರಸ್ತೆಯಲ್ಲಿ ಹಾಗೆಯೇ ಬಿದ್ದಿತ್ತು. ಆದರೆ ರಸ್ತೆಯನ್ನು ದುರಸ್ತಿ ಮಾಡಿರಲಿಲ್ಲ. ಇದರಿಂದಾಗಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಸ್ಥಳೀಯರು ನೋವು ವ್ಯಕ್ತಪಡಿಸಿದ್ದಾರೆ.
ಕೆ.ಆರ್.ಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸೇನೆಯ ವಾಹನವನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.