ಕೋಲ್ಕತಾ, ಆ 12 (DaijiworldNews/DB): ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಅಗತ್ಯವಿಲ್ಲದಿದ್ದಲ್ಲಿ ನಿಮ್ಮನ್ನೂ ನಡು ನೀರಲ್ಲಿ ಕೈ ಬಿಡುತ್ತಾರೆ ಎಂದು ಪಶ್ಚಿಮ ಬಂಗಾಳದ ಟಿಎಂಸಿ ನಾಯಕರನ್ನುದ್ದೇಶಿಸಿ ಬಿಜೆಪಿಯ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಮಾಳವಿಯ, ಆಪ್ತರಾದ ಪಾರ್ಥ ಚಟರ್ಜಿ ಹಾಗೂ ಅನುಬ್ರತಾ ಮೊಂಡಾಲ್ ಅವರು ತೀರಾ ಅಗತ್ಯ ಸಮಯದಲ್ಲಿ ಕರೆ ಮಾಡಿದರೆ ಸಿಎಂ ಬ್ಯಾನರ್ಜಿ ಅವರ ಕರೆಗಳನ್ನೇ ಸ್ವೀಕರಿಸುತ್ತಿರಲಿಲ್ಲ. ಅವರಿಗೆ ಅಗತ್ಯವಿದ್ದರೆ ಮಾತ್ರ ನಿಮ್ಮೊಂದಿಗೆ ಇರುತ್ತಾರೆ. ಅಗತ್ಯವಿಲ್ಲವೆಂದಾದಲ್ಲಿ ನಡು ನೀರಿನಲ್ಲೇ ಕೈ ಬಿಡುತ್ತಾರೆ. ಹೀಗಾಗಿ ಲೂಟಿ, ಕೊಲೆ, ಅತ್ಯಾಚಾರಗಳಂತ ಪ್ರಕರಣಗಳಲ್ಲಿ ಮಮತಾ ಜೊತೆ ಸಹಕರಿಸಿದ ಟಿಎಂಸಿ ನಾಯಕರು, ಕಾರ್ಯಕರ್ತರಿಗೆ ಇದೊಂದು ಎಚ್ಚರಿಕೆಯ ಸಂದೇಶವಾಗಿದೆ ಎಂದಿದ್ದಾರೆ.
2020ರ ಗೋಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಬಿಐನಿಂದ ಟಿಎಂಸಿ ನಾಯಕ ಅನುಬ್ರಾತಾ ಮೊಂಡಾಲ್ ಅವರ ಬಂಧನವಾದ ಬೆನ್ನಲ್ಲೇ ಮಾಳವಿಯಾ ಈ ಟ್ವೀಟ್ ಮಾಡಿದ್ದಾರೆ. ಈ ಬಂಧನಕ್ಕೂ ಮೊದಲು ಶಿಕ್ಷಕರ ನೇಮಕಾತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ತನಿಖೆಗೆ ಸಂಬಂಧಿಸಿದಂತೆ ಹಿರಿಯ ಟಿಎಂಸಿ ನಾಯಕ ಪಾರ್ಥ ಚಟರ್ಜಿ ಮತ್ತು ಅವರ ಆಪ್ತ ಸಹಾಯಕಿ ಅರ್ಪಿತಾ ಮುಖರ್ಜಿ ಅವರನ್ನು ಸಿಬಿಐ ಬಂಧಿಸಿತ್ತು.