ಬಾಗಲಕೋಟೆ, ಆ 12 (DaijiworldNews/DB): ಊಟ ಮಾಡುವ ವೇಳೆ ಪತ್ನಿಯೊಂದಿಗೆ ಜಗಳ ಮಾಡಿದ್ದ ಕಾರಣಕ್ಕೆ ಯೋಧನೊಬ್ಬನನ್ನು ಪತ್ನಿಯ ಸಹೋದರನೇ ಕೊಲೆ ಮಾಡಿದ ಘಟನೆ ಗುರುವಾರ ರಾತ್ರಿ ಬಾದಾಮಿ ತಾಲೂಕಿನ ನೀರಲಕೇರಿ ಗ್ರಾಮದಲ್ಲಿ ನಡೆದಿದೆ.
ಕರಿಸಿದ್ದಪ್ಪ ಕಳಸದ (25) ಕೊಲೆಯಾದ ಯೋಧ. ಕರಿಸಿದ್ದಪ್ಪ ವಿದ್ಯಾ ಎಂಬಾಕೆಯನ್ನು ಪ್ರೀತಿಸಿ ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದರು. ಭಾರತೀಯ ಸೇನೆಯ ರಾಜಸ್ಥಾನ ನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕರಿಸಿದ್ದಪ್ಪ ರಜೆಯಲ್ಲಿ ಊರಿಗೆ ಬಂದಿದ್ದರು. ನಿನ್ನೆ ರಾತ್ರಿ ಊಟ ಮಾಡುವ ವೇಳೆ ಪತ್ನಿ ಜೊತೆ ಕ್ಷುಲ್ಲಕ ಕಾರಣಕ್ಕೆ ಜಗಳ ಮಾಡಿದ್ದರು. ಈ ವಿಚಾರವನ್ನು ವಿದ್ಯಾ ತನ್ನ ಸಹೋದರ ಧರಿಗೌಡ ಎಂಬಾತನಿಗೆ ತಿಳಿಸಿದ್ದಳು. ಇದರಿಂದ ಕೋಪಗೊಂಡ ಸಹೋದರ ಸಹೋದರಿಯ ಮನೆಗೆ ಬಂದು ಭಾವ ಕರಿಸಿದ್ದಪ್ಪನನ್ನು ಪ್ರಶ್ನೆ ಮಾಡಿದ್ದಾನೆ. ನನ್ನ ಸಹೋದರಿಗೆ ಕಿರುಕುಳು ನೀಡುತ್ತೀಯಾ ಎಂದು ಪ್ರಶ್ನಿಸಿ ಚಾಕು ಇರಿದು ಹತ್ಯೆ ಮಾಡಿದ್ದಾನೆ.
ಘಟನೆ ಬಗ್ಗೆ ಮಾಹಿತಿ ಪಡೆದುಕೊಂಡ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.