ಗುಜರಾತ್, ಆ 12 (DaijiworldNews/HR): ಕಾರು, ಆಟೋ ಮತ್ತು ಬೈಕ್ ನಡುವೆ ಅಪಘಾತ ನಡೆದು ಆರು ಮಂದಿ ಮೃತಪಟ್ಟಿರುವ ದುರ್ಘಟನೆ ಗುಜರಾತ್ ರಾಜ್ಯದ ಆನಂದ್ ಜಿಲ್ಲೆಯಲ್ಲಿ ನಡೆದಿದೆ.
ಗುರುವಾರ ರಾತ್ರಿ ಕಾರು, ಬೈಕ್ ಮತ್ತು ಆಟೋ ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಆರು ಮಂದಿ ಸಾವನ್ನಪ್ಪಿದ್ದು, ಮೃತರಲ್ಲಿ ಇಬ್ಬರು ಸಹೋದರಿಯರು ಹಾಗೂ ಅವರ ತಾಯಿ ಸೇರಿದಂತೆ ಒಂದೇ ಕುಟುಂಬದ ಮೂವರು ಸೇರಿದ್ದಾರೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ್ ಗುಪ್ತಾ ತಿಳಿಸಿದ್ದಾರೆ.
ಇನ್ನು ಆಟೋ ರಿಕ್ಷಾ ಚಾಲಕ ಮತ್ತು ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟರೆ, ಆಟೋ ರಿಕ್ಷಾದಲ್ಲಿ ಸವಾರಿ ಮಾಡುತ್ತಿದ್ದ ಇತರ ಮೂವರು ಮತ್ತು ಬೈಕ್ ನಲ್ಲಿದ್ದ ಹಿಂಬದಿ ಸವಾರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.