ನವದೆಹಲಿ, ಆ 11 (DaijiworldNews/SM): ಜನರಿಗೆ ಉಚಿತ ಸೌಲಭ್ಯಗಳನ್ನು ನೀಡುವುದನ್ನು ಕೇಂದ್ರ ಸರ್ಕಾರ "ಬಲವಾಗಿ ವಿರೋಧಿಸುತ್ತಿರುವ" ರೀತಿ ನೋಡಿದರೆ ಅದರ ಹಣಕಾಸಿನಲ್ಲಿ ಏನೋ ತಪ್ಪಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಗುರುವಾರ ಹೇಳಿದ್ದಾರೆ.
ಸೈನಿಕರಿಗೆ ಪಿಂಚಣಿ ನೀಡಲು ಹಣ ಇಲ್ಲ ಎಂದು ಅಗ್ನಿಪಥ್ ಯೋಜನೆಯನ್ನು ಜಾರಿಗೆ ತಂದರು. ದೇಶವು ಸ್ವಾತಂತ್ರ್ಯ ಬಂದ ಬಳಿಕ ಸೈನಿಕರಿಗೆ ಪಿಂಚಣಿ ಪಾವತಿಸಲು ಎಂದಿಗೂ ಹಣದ ಕೊರತೆ ಎದುರಿಸಿರಲಿಲ್ಲ ಎಂದು ಕೇಜ್ರಿವಾಲ್ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಕೇಂದ್ರ ಸರ್ಕಾರದ ಹಣ ಎಲ್ಲಿಗೆ ಹೋಗಿದೆ? ಕೇಂದ್ರ ಸರ್ಕಾರ ತಾನು ಸಂಗ್ರಹಿಸಿದ ತೆರಿಗೆಯ ಒಂದು ಭಾಗವನ್ನು ರಾಜ್ಯಗಳ ಜತೆ ಹಂಚಿಕೊಳ್ಳುತ್ತದೆ. ಈ ಮುನ್ನ ಇದು ಶೇ 42ರಷ್ಟಿತ್ತು. ಈಗ ಅದು ಶೇ 29-30ಕ್ಕೆ ಇಳಿದಿದೆ. 2014ರಲ್ಲಿ ತಾನು ಸಂಗ್ರಹಿಸುತ್ತಿದ್ದ ತೆರಿಗೆಗಳ ಮೊತ್ತಕ್ಕಿಂತ ಎರಡು- ಮೂರು ಪಟ್ಟು ಹೆಚ್ಚು ತೆರಿಗೆ ಸಂಗ್ರಹಿಸುತ್ತಿದೆ. ಈ ಎಲ್ಲ ಹಣ ಎಲ್ಲಿ ಹೋಗುತ್ತಿದೆ?" ಎಂದು ಕೇಜ್ರಿವಾಲ್ ಪ್ರಶ್ನಿಸಿದ್ದಾರೆ.
ಕೇಂದ್ರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ವರ್ಷಕ್ಕೆ 3.5 ಲಕ್ಷ ಕೋಟಿ ರೂಪಾಯಿ ಸೇರಿದಂತೆ ದೊಡ್ಡ ಪ್ರಮಾಣದ ತೆರಿಗೆಗಳನ್ನು ಸಂಗ್ರಹಿಸುತ್ತದೆ ಮತ್ತು ದೇಶದ ಜನರಿಗೆ ಉಚಿತ ಶಿಕ್ಷಣ, ಆರೋಗ್ಯ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವುದನ್ನು ಇನ್ನೂ ವಿರೋಧಿಸುತ್ತಿದೆ ಎಂದು ದೆಹಲಿ ಸಿಎಂ ಹೇಳಿದ್ದಾರೆ.
"ಸೈನಿಕರಿಗೆ ಪಿಂಚಣಿ ನೀಡಲು ಸಹ ಕೇಂದ್ರ ಸರ್ಕಾರ ಹಣದ ಕೊರತೆಯನ್ನು ಉಲ್ಲೇಖಿಸುತ್ತಿರುವುದು ಗಮನಿಸಿದರೆ ಅದರ ಹಣಕಾಸಿನಲ್ಲಿ ಏನೋ ದೋಷವಿದೆ" ಎಂದಿದ್ದಾರೆ.