ಬಾಂಡಾ, ಆ 11 (DaijiworldNews/DB): 30ಕ್ಕೂ ಹೆಚ್ಚು ಮಂದಿಯನ್ನು ಹೊತ್ತು ಸಾಗುತ್ತಿದ್ದ ದೋಣಿಯೊಂದು ಯಮುನಾ ನದಿಯಲ್ಲಿ ಮುಳುಗಿ 20 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ ಬಾಂಡಾ ಜಿಲ್ಲೆಯಲ್ಲಿ ನಡೆದಿದೆ.
ಫತೇಪುರಕ್ಕೆ ತೆರಳುತ್ತಿದ್ದ ದೋಣಿ ಮುಳುಗಿ ದುರಂತ ಸಂಭವಿಸಿದೆ. ದೋಣಿಯಲ್ಲಿದ್ದವರ ರಕ್ಷಣಾ ಕಾರ್ಯ ನಡೆಯುತ್ತಿದೆ. ಘಟನೆ ಸಂಬಂಧ ದುಃಖ ವ್ಯಕ್ತಪಡಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ತತ್ಕ್ಷಣ ಪರಿಹಾರ ಹಾಗೂ ರಕ್ಷಣಾ ಕಾರ್ಯ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ, ಡಿಐಜಿ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸುವಂತೆ ಮುಖ್ಯಮಂತ್ರಿಗಳು ನಿರ್ದೇಶನ ನೀಡಿದ್ದಾರೆ. ಅಲ್ಲದೆ ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆಯೂ ಸೂಚನೆ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.