ರಾಯಚೂರು, ಆ 11 (DaijiworldNews/DB): ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ಗುರುರಾಘವೇಂದ್ರ ಸ್ವಾಮಿಗಳ 451ನೇ ಆರಾಧನಾ ಮಹೋತ್ಸವದ ಹಿನ್ನೆಲೆ ಕುಟುಂಬ ಸಮೇತರಾಗಿ ಗುರುವಾರ ಮಂತ್ರಾಲಯಕ್ಕೆ ಭೇಟಿ ನೀಡಿ ಮಠದ ಪೀಠಾಧಿಪತಿ ಶ್ರೀ ಸುಭುದೇಂದ್ರ ತೀರ್ಥರ ಆಶೀರ್ವಾದ ಪಡೆದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಮಂತ್ರಾಲಯಕ್ಕೆ ಬಂದಾಗ ನನ್ನ ಕುಟುಂಬಕ್ಕೆ ಹಾಗೂ ನನಗೆ ಪ್ರೇರಣೆ ಸಿಕ್ಕಿದೆ. ನನಗೆ ರಾಯರು ಎಲ್ಲವನ್ನೂ ಕರುಣಿಸಿದ್ದಾರೆ. ನಾಳೆಯಿಂದಲೇ ನಾಯಕರೊಂದಿಗೆ ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಬಿಜೆಪಿಯ ಸಾಧನೆ, ಅಭಿವೃದ್ದಿ ಕೆಲಸಗಳನ್ನು ಜನಮನ ತಲುಪಿಸುವ ಪ್ರಯತ್ನ ನಡೆಸಲಾಗುವುದು. ಬಿಜೆಪಿಯನ್ನು ಪುನಃ ಅಧಿಕಾರಕ್ಕೆ ತರುವುದೇ ನನ್ನ ಸಂಕಲ್ಪ ಎಂದರು.
ನಾನೇ ಸಿಎಂ ಎಂದುಕೊಂಡು ಕೆಲವರು ಮಾತನಾಡುತ್ತಿದ್ದಾರೆ. ಆದರೆ ನಾವೆಂದೂ ಅದಕ್ಕೆ ಅವಕಾಶ ಮಾಡಿಕೊಡುವುದಿಲ್ಲ. ಬಿಜೆಪಿ ಅಧಿಕಾರಕ್ಕೇರುವುದಕ್ಕೆ ಎಲ್ಲಾ ಪ್ರಯತ್ನ ನಡೆಸುತ್ತೇವೆ. ಇದರಲ್ಲಿ ಯಶಸ್ವಿಯಾಗುವ ವಿಶ್ವಾಸವಿದೆ ಎಂದರು.
ಶಿಕಾರಿಪುರದಲ್ಲಿ ವಿಜಯೇಂದ್ರ ಸ್ಪರ್ಧೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾನು ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹೀಗಾಗಿ ಅಲ್ಲಿ ವಿಜಯೇಂದ್ರ ಸ್ಪರ್ಧಿಸಬಹುದು ಎಂದು ಹೇಳಿದ್ದೇನೆ. ಆದರೆ ಅದನ್ನು ನಿರ್ಧರಿಸುವವರು ವರಿಷ್ಠರು ಎಂದು ತಿಳಿಸಿದರು.
ಬಸವರಾಜ ಬೊಮ್ಮಾಯಿ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಯಾರೇನೇ ಹೇಳಿದರೂ ಮುಖ್ಯಮಂತ್ರಿಯಾಗಿ ಅವರೇ ಮುಂದುವರಿಯಲಿದ್ದಾರೆ. ಸಿಎಂ ಬದಲಾವಣೆ ಆಗುವುದಿಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.
ಬಿಹಾರದಲ್ಲಿ ನಿತೀಶ್ಕುಮಾರ್ ಅವರು ಹಲವು ಬಾರಿ ಮೈತ್ರಿ ಮಾಡಿ ಆನಂತರ ಕೈ ಬಿಟ್ಟಿರುವ ಉದಾಹರಣೆ ಇದೆ. ಹೀಗಾಗಿ ನಮ್ಮ ಪಕ್ಷಕ್ಕೆ ಇದರಿಂದ ಯಾವುದೇ ತೊಂದರೆ ಉಂಟಾಗುವುದಿಲ್ಲ. ಮುಂದೆಯೂ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದರು.