ಬೆಂಗಳೂರು, ಆ 11 (DaijiworldNews/DB): ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ ಯಾವುದೇ ಸಂಘಟನೆಗಳಿಗೆ ಧ್ವಜಾರೋಹಣ ಮಾಡಲು ಅವಕಾಶ ನೀಡದಿರಲು ಸರ್ಕಾರ ನಿರ್ಧರಿಸಿದೆ.
ಈ ಮೈದಾನದಲ್ಲಿ ಧ್ವಜಾರೋಹಣ ಮಾಡುವ ಬಗ್ಗೆ ಎದ್ದಿದ್ದ ವಿವಾದವನ್ನು ತಣ್ಣಗಾಗಿಸಲು ಸರ್ಕಾರ ಮುಂದಾಗಿದ್ದು, ಯಾವುದೇ ಸಂಘಟನೆಗಳಿಗೆ ಧ್ವಜಾರೋಹಣಗೈಯಲು ಅವಕಾಶ ನೀಡದಿರಲು ನಿರ್ಧರಿಸಿದೆ. ಬದಲಾಗಿ ಸರ್ಕಾರದ ವತಿಯಿಂದಲೇ ಧ್ವಜಾರೋಹಣ ನಡೆಸಲು ನಿರ್ಣಯ ಕೈಗೊಳ್ಳಲಾಗಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಚಾಮರಾಜಪೇಟೆ ಆಟದ ಮೈದಾನ ಕಂದಾಯ ಇಲಾಖೆಯ ಸ್ವತ್ತು. ಹೀಗಾಗಿ ಇಲಾಖೆ ವತಿಯಿಂದಲೇ ಧ್ವಜಾರೋಹಣ ನೆರವೇರಿಸಲಾಗುವುದು. ಯಾವುದೇ ಧಾರ್ಮಿಕ ಆಚರಣೆ, ಘೋಷಣೆ ಕೂಗಲು ಅವಕಾಶವಿಲ್ಲ. ಭಾರತ ಮಾತಾಕೀ ಜೈ, ವಂದೇ ಮಾತರಂ, ಸ್ವಾತಂತ್ರ್ಯ ಯೋಧರ ಹೆಸರು ಘೋಷಣೆ ಮಾತ್ರ ಕೂಗಬೇಕು ಎಂದರು.
ಉಪವಿಭಾಗಾಧಿಕಾರಿಯವರು ಸರ್ಕಾರದ ಪರವಾಗಿ ಧ್ವಜಾರೋಹಣ ನೆರವೇರಿಸಲಿದ್ದಾರೆ. ಸಾರ್ವಜನಿಕರು ಇದರಲ್ಲಿ ಪಾಲ್ಗೊಳ್ಳಬಹುದು. ಯಾವುದೇ ಸಂಘಟನೆಗಳಾಗಲೀ ಚಾಮರಾಜಪೇಟೆ ಮೈದಾನದಲ್ಲಿ ಧ್ವಜಾರೋಹಣ ಮಾಡುವಂತಿಲ್ಲ. ಕ್ಷೇತ್ರದ ಶಾಸಕರು, ಸಂಸದರು ಸೇರಿದಂತೆ ಸಾರ್ವಜನಿಕರು ಪಾಲ್ಗೊಳ್ಳಬಹುದು ಎಂದು ತಿಳಿಸಿದರು.