ನೋಯ್ಡಾ, ಆ 11 (DaijiworldNews/MS): ಉತ್ತರ ಪ್ರದೇಶದ ನೊಯ್ಡಾದಲ್ಲಿ ಮಹಿಳೆಯ ಮೇಲೆ ಹಲ್ಲೆ ನಡೆಸಿ, ಅಸಭ್ಯವಾಗಿ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೂರಜ್ಪುರ ನ್ಯಾಯಾಲಯವು ಬಿಜೆಪಿ ಮುಖಂಡ ಶ್ರೀಕಾಂತ್ ತ್ಯಾಗಿ ಅವರ ಜಾಮೀನು ಅರ್ಜಿಯನ್ನು ಗುರುವಾರ ತಿರಸ್ಕರಿಸಿದೆ.
ಮಹಿಳೆ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 354 ರ ಅಡಿಯಲ್ಲಿ ಸಲ್ಲಿಸಲಾದ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.ಐಪಿಸಿ ಸೆಕ್ಷನ್ 420, 419, 482ರ ಅಡಿಯಲ್ಲಿ ದಾಖಲಾಗಿರುವ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಆಗಸ್ಟ್ 16 ರಂದು ವಿಚಾರಣೆ ನಡೆಸಲಿದೆ.
ಶ್ರೀಕಾಂತ್ ತ್ಯಾಗಿ ಅವರ ನೋಯ್ಡಾ ಸೆಕ್ಟರ್ 93 ಬಿ ನಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಮಹಿಳೆಯೊಬ್ಬರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ನಡೆಸಿದ ಆರೋಪದ ಮೇಲೆ ಪೊಲೀಸರು ಅವರನ್ನು ಮಂಗಳವಾರ ಬಂಧಿಸಿದ್ದರು. ತ್ಯಾಗಿ ಅವರು ಕೆಲವು ಸಸಿಗಳನ್ನು ನೆಡಲು ಬಯಸಿದ್ದರು. ಆದರೆ, ನಿಯಮಗಳ ಉಲ್ಲಂಘನೆಯನ್ನು ಉಲ್ಲೇಖಿಸಿ ಮಹಿಳೆ ಅದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿತ್ತು.12 ಪೊಲೀಸ್ ತಂಡಗಳು ಮತ್ತು ಉತ್ತರ ಪ್ರದೇಶ ಎಸ್ಟಿಎಫ್ 3 ರಾಜ್ಯಗಳಲ್ಲಿ ಶ್ರೀಕಾಂತ್ ತ್ಯಾಗಿಗಾಗಿ ಹುಡುಕಾಟ ನಡೆಸಿತ್ತು.