ಪಲಕ್ಕಾಡ್, ಆ 11 (DaijiworldNews/DB): ಪ್ರೀತಿಗೆ ಮೋಸ ಮಾಡಿದಳೆಂದು ಪ್ರೇಯಸಿಯನ್ನು ಮಾಜಿ ಪ್ರಿಯಕರ ಉಸಿರುಗಟ್ಟಿಸಿ ಹತ್ಯೆಗೈದ ಘಟನೆ ಕೇರಳದ ಮಲಪ್ಪುರಂ ಜಿಲ್ಲೆಯ ಕೊನ್ನಲ್ಲೂರು ಗ್ರಾಮದಲ್ಲಿ ನಡೆದಿದೆ.
ಕೊನ್ನಲ್ಲೂರಿನ ಶಿವದಾಸನ್ ಮತ್ತು ಗೀತಾ ದಂಪತಿಯ ಪುತ್ರಿ ಸೂರ್ಯಪ್ರಿಯಾ (24) ಹತ್ಯೆಯಾದ ಯುವತಿ. ಈಕೆಯ ಮಾಜಿ ಪ್ರಿಯಕರ ಸೇಲಂನ ಕರೂರ್ನಲ್ಲಿರುವ ಖರ್ಜೂರದ ಕಂಪನಿಯಲ್ಲಿ ಸೇಲ್ಸ್ಮ್ಯಾನ್ ಆಗಿರುವ ಅಂಜುಮೂರ್ತಿಮಂಗಲದ ಅನಕಪ್ಪರ ನಿವಾಸಿ ಸುಜೀಶ್ (27) ಕೊಲೆಗೈದ ಆರೋಪಿ. ಸೂರ್ಯಪ್ರಿಯಾ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಸುಜೀಶ್ ಆಕೆಯ ಮನೆಗೆ ತೆರಳಿದ್ದು, ಬಳಿಕ ಇಬ್ಬರಿಗೆ ವಾಗ್ವಾನ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ. ಆನಂತರ ಆರೋಪಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ.
ಡೆಮೋಕ್ರೆಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾದ ಬ್ಲಾಕ್ ಕಮಿಟಿ ಸದಸ್ಯೆ ಮತ್ತು ಮೆಲಾರಕೋಡು ಪಂಚಾಯತ್ ಕುಟುಂಬಶ್ರೀ ಸಿಡಿಎಸ್ ಸದಸ್ಯೆಯಾಗಿದ್ದ ಸೂರ್ಯಪ್ರಿಯಾ ಮತ್ತು ಸಜೀಶ್ ಕಳೆದ ಆರು ವರ್ಷದಿಂದ ಪ್ರೀತಿಸುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಸುಜೀಶ್ ಜೊತೆಗೆ ಪ್ರೀತಿಯನ್ನು ಮುರಿದುಕೊಂಡಿದ್ದಳು. ಆಕೆ ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿದ್ದಾಳೆಂದು ಇಬ್ಬರ ನಡುವೆ ಈ ಹಿಂದೆ ಫೋನ್ ಮೂಲಕ ವಾಗ್ವಾದ ನಡೆದಿತ್ತು. ಬಳಿಕ ಬುಧವಾರ ಆಕೆಯನ್ನು ನೇರವಾಗಿ ಭೇಟಿ ಮಾಡಿ ಪ್ರಶ್ನಿಸುವುದಕ್ಕಾಗಿ ಸುಜೀಶ್ ಆಕೆಯ ಮನೆಗೆ ತೆರಳಿದ್ದ. ಈ ವೇಳೆ ಸೂರ್ಯಪ್ರಿಯಾ ತಾಯಿ ಗೀತಾ ಕೆಲಸಕ್ಕೆಂದು ಹೊರಗಡೆ ತೆರಳಿದ್ದರೆ, ಆಕೆಯ ಸಹೋದರ ರಾಧಾಕೃಷ್ಣನ್ ಬ್ಯಾಂಕ್ಗೆ ತೆರಳಿದ್ದರು. ಅಜ್ಜ ಚಹಾ ಕುಡಿಯಲೆಂದು ಹೊರಗಡೆ ತೆರಳಿದ್ದರು. ಮನೆಯಲ್ಲಿ ಸೂರ್ಯಪ್ರಿಯಾ ಒಬ್ಬಳೇ ಇದ್ದು, ಸುಜೀಶ್ ಮತ್ತು ಆಕೆಯ ನಡುವೆ ವಾಗ್ವಾದ ನಡೆದಿದೆ. ಬಳಿಕ ಸುಜೀಶ್ ಆಕೆಯ ಮೊಬೈಲ್ ಪರಿಶೀಲಿಸಿದ್ದು, ಮೆಸೇಜ್ ವಿಚಾರಕ್ಕೆ ಗಲಾಟೆ ನಡೆದಿದೆ. ಈ ವೇಳೆ ಆಕೆ ಆತ್ಮಹತ್ಯೆಗೆ ಯತ್ನಿಸಿದ್ದಳು. ಆದರೆ ಬಳಿಕ ಸುಜೀಶ್ ಟವೆಲ್ ಮೂಲಕ ಆಕೆಯ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಕೊಲೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಕೊಲೆಗೈದ ಬಳಿಕ ಆತ ಆಕೆಯ ಮೊಬೈಲ್ ಫೋನ್ ಸಹಿತ ಆಲತ್ತೂರು ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಪೊಲೀಸರು ಸ್ಥಳಕ್ಕಾಗಮಿಸಿದ ಬಳಿಕವೇ ಸ್ಥಳೀಯರು ಮತ್ತು ಸಂತ್ರಸ್ತೆಯ ಅಜ್ಜನಿಗೆ ವಿಷಯ ಗೊತ್ತಾಗಿದೆ. ಮೃತದೇಹವನ್ನು ತ್ರಿಶೂರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.