ಬೆಂಗಳೂರು, ಆ 11 (DaijiworldNews/DB): ಮೋದಿಜಿಯವರ 'ಡಿಜಿಟಲ್ ಇಂಡಿಯಾ' ಘೋಷಣೆಗೆ ರಾಜ್ಯ ಬಿಜೆಪಿ ಸರ್ಕಾರ ಸಮರ್ಥವಾಗಿ ಅರ್ಥ ಕೊಡುತ್ತಿದೆ. ಆದರೆ ಅಕ್ರಮ ನಡೆಸುವುದರಲ್ಲಿ ಮಾತ್ರ! ಎಂದು ಕರ್ನಾಟಕ ಕಾಂಗ್ರೆಸ್ ವ್ಯಂಗ್ಯವಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಎಲ್ಲಾ ನೇಮಕಾತಿ ಪರೀಕ್ಷೆಗಳಲ್ಲೂ ಬ್ಲೂಟೂತ್, ಫೋನ್, ಸ್ಮಾರ್ಟ್ ವಾಚ್ಗಳೇ ಕೆಲಸ ಮಾಡುತ್ತಿವೆ. 40% ಸರ್ಕಾರದ ಈ ಡಿಜಿಟಲ್ ಕ್ರಾಂತಿಯಿಂದ 'ಸರ್ಕಾರಿ ಹುದ್ದೆ ಮಾರಾಟ ಯೋಜನೆ ಎಗ್ಗಿಲ್ಲದೆ ಸಾಗುತ್ತಿದೆ ಎಂದು ಆಪಾದಿಸಿದೆ.
ಸಿಎಂ ಬದಲಾವಣೆ ಗೊಂದಲಗಳಿಗೆ ಕಾಂಗ್ರೆಸ್ ಹೊಣೆ ಎಂದ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕಿಡಿ ಕಾರಿರುವ ಕಾಂಗ್ರೆಸ್, ಸಿಎಂ ಬದಲಾವಣೆ ವಿಚಾರದ ನಂತರ ರಾಜ್ಯಾಧ್ಯಕ್ಷರ ಬದಲಾವಣೆಯ ಗೊಂದಲ. ರಾಜ್ಯಾಧ್ಯಕ್ಷರ ಅವಧಿ ಮುಗಿದಿದೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ಹೇಳಿದರೆ ಯಾರು ಹೇಳಿದವರು ಎಂದು ನಳಿನ್ಕುಮಾರ್ ಕಟೀಲು ಕೇಳುತ್ತಾರೆ. ಸ್ಪಷ್ಟತೆ ಇಲ್ಲದೆ ಕಾಂಗ್ರೆಸ್ ಕೈಗೆ ಕೋಲು ಕೊಡುವವರೂ ಇವರೇ, ಹೊಡೆಸಿಕೊಂಡ ನಂತರ ಗೋಳಾಡುವವರೂ ಇವರೇ! ಎಂದು ಲೇವಡಿ ಮಾಡಿದೆ.