ನವದೆಹಲಿ, ಆ 11 (DaijiworldNews/DB): ಜಾನುವಾರು ಕಳ್ಳಸಾಗಣೆ ಪ್ರಕರಣ ಸಂಬಂಧಿಸಿ ಟಿಎಂಸಿ ಬಿರ್ಭುಮ್ ಜಿಲ್ಲಾ ಅಧ್ಯಕ್ಷ ಅನುಬ್ರತಾ ಮಂಡಲ್ ಅವರನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಬಂಧಿಸಿದೆ.
2020 ರ ಜಾನುವಾರು ಕಳ್ಳಸಾಗಣೆ ಪ್ರಕರಣ ಇದಾಗಿದ್ದು, ಈ ಸಂಬಂಧ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಅವರ ನಿಕಟವರ್ತಿಯೂ ಆಗಿರುವ ಮಂಡಲ್ ಅವರನ್ನು ಬಿರ್ಭುಮ್ ಜಿಲ್ಲೆಯಲ್ಲಿರುವ ಅವರ ಮನೆಯಿಂದ ಆಗಸ್ಟ್ 11ರ ಗುರುವಾರ ಬಂಧಿಸಲಾಗಿದೆ. ಬಂಧನದ ಬಳಿಕ ಸುಮಾರು ಒಂದೂವರೆ ತಾಸು ಕಾಲ ಅವರನ್ನು ವಿಚಾರಣೆಗೊಳಪಡಿಸಲಾಯಿತು. ಶೀಘ್ರ ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿ ಬಳಿಕ ಅಸನ್ಸೋಲ್ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಂಡಲ್ ಬಂಧನಕ್ಕೂ ಮುನ್ನ ಸಿಬಿಐ ಹತ್ತು ಬಾರಿ ಅವರಿಗೆ ಸಮನ್ಸ್ ನೀಡಿತ್ತು. ಆದರೆ ಒಮ್ಮೆ ಮಾತ್ರ ವಿಚಾರಣೆಗೆ ಹಾಜರಾಗಿದ್ದ ಅವರು, ಅನಾರೋಗ್ಯ ಕಾರಣ ನೀಡಿ ಅವರು ಮತ್ತೆಂದೂ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಹಿಂದೆ ಕೇಂದ್ರೀಯ ಏಜೆನ್ಸಿ ಎರಡು ಬಾರಿ ಅವರನ್ನು ಪ್ರಕರಣ ಸಂಬಂಧ ಪ್ರಶ್ನಿಸಿತ್ತು. ಇದಾದ ಬಳಿಕ ಕೋಲ್ಕತಾದ ಎಸ್ಎಸ್ಕೆಎಂ ಆಸ್ಪತ್ರೆ ಅವರಿಗೆ ಪ್ರವೇಶದ ಅಗತ್ಯವಿಲ್ಲ ಎಂದು ಹೇಳಿದ ಬಳಿಕ ಅವರನ್ನು ಬಂಧಿಸಲಾಗಿದೆ.
ಮಂಡಲ್ ಅವರನ್ನು ಸಿಬಿಐ ಬಂಧಿಸಿ ಕರೆದೊಯ್ಯುತ್ತಿದ್ದಂತೆ ನಿವಾಸದ ಹೊರ ಭಾಗದಲ್ಲಿ ಜನ ಸಾಕಷ್ಟು ಸಂಖ್ಯೆಯಲ್ಲಿ ಸೇರಿದ್ದರು. ನಿವಾಸದ ಸುತ್ತ ಸಿಆರ್ಪಿಎಫ್ ಯೋಧರನ್ನು ನಿಯಾಜಿಸಲಾಗಿತ್ತಲ್ಲದೆ, ಸುಮಾರು ಹತ್ತಕ್ಕೂ ಹೆಚ್ಚು ಬೆಂಗಾವಲು ಪಡೆ ವಾಹನಗಳು ಇದ್ದವು.