ಬೆಂಗಳೂರು, ಆ 11 (DaijiworldNews/MS): ಮೋದಿ ಸರ್ಕಾರ ರಾಷ್ಟ್ರಧ್ವಜವನ್ನೂ ಮಾರಾಟ ಮಾಡಿ ಸಂಪಾದಿಸುವ ದರಿದ್ರ ಸ್ಥಿತಿಗೆ ತಲುಪಿದೆ ಎಂದು ಕಾಂಗ್ರೆಸ್ ನಾಯಕ ದಿನೇಶ್ ಗುಂಡುರಾವ್ ಕಿಡಿಕಾರಿದ್ದಾರೆ.
ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಕಿಡಿಕಾರಿರುವ ಅವರು, ಸರಣಿ ಟ್ವೀಟ್ ಮಾಡಿದ್ದು , "ಮೋದಿಯವಯವರಿಗೆ ಹರ್ ಘರ್ ತಿರಂಗಾ ಹೆಸರಿನಲ್ಲಿ ನಕಲಿ ದೇಶಾಭಿಮಾನ ತೋರಿಸುವ ತೆವಲು ಶುರುವಾಗಿದೆ. ನೈಜ ದೇಶಾಭಿಮಾನ ಇದ್ದವರು ರಾಷ್ಟ್ರಧ್ವಜ ಮಾರಾಟ ಮಾಡುವುದಿಲ್ಲ. ಧ್ವಜ ಖರೀದಿಸದವರಿಗೆ ಪಡಿತರ ನಿರಾಕರಿಸುವುದು,ರೈಲ್ವೇ ನೌಕರ ಸಂಬಳದಲ್ಲಿ ₹22ಕಡಿತ ಮಾಡುವುದು, ಈ-ಪೋಸ್ಟ್ ಮೂಲಕ ₹25 ಶುಲ್ಕ ವಿಧಿಸುವುದರಿಂದ ದೇಶ ಪ್ರೇಮ ಹುಟ್ಟಲು ಸಾಧ್ಯವೆ?ಎಂದು ಪ್ರಶ್ನಿಸಿದ್ದಾರೆ.
ಮೋದಿ ಸರ್ಕಾರ ರಾಷ್ಟ್ರಧ್ವಜವನ್ನೂ ಮಾರಾಟ ಮಾಡಿ ಸಂಪಾದಿಸುವ ದರಿದ್ರ ಸ್ಥಿತಿಗೆ ತಲುಪಿದೆ. ಇಂದು ರಾಷ್ಟ್ರಧ್ವಜವನ್ನೇ ಮಾರುವವರು ಮುಂದೆ ದೇಶ ಮಾರುವುದಿಲ್ಲವೆ? 70 ವರ್ಷಗಳಿಂದ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳುತ್ತಲೆ ಕಾಂಗ್ರೆಸ್ ಕಟ್ಟಿದ ಎಲ್ಲಾ ಸಂಸ್ಥೆಗಳನ್ನು ಖಾಸಗೀಕರಣದ ನೆಪದಲ್ಲಿ ಮಾರಿದ್ದಾರೆ. ಈಗ ರಾಷ್ಟ್ರಧ್ವಜವನ್ನೂ ಬಿಡುತಿಲ್ಲ ಎಂದು ಹೇಳಿದ್ದಾರೆ.
ದುಡ್ಡಿಗೆ ರಾಷ್ಟ್ರಧ್ವಜ ಮಾರುವುದು ಯಾವ ದೇಶಾಭಿಮಾನದ ಸಂಕೇತ? ದೇಶಾಭಿಮಾನ ಬೀದಿಯಲ್ಲಿ ಮಾರಾಟವಾಗುವ ಸರಕಾಗಿದೆಯೇ? ಈಗಾಗಲೇ PM cares ನಲ್ಲಿ ಜನರ ಲಕ್ಷಾಂತರ ಕೋಟಿ ಹಣ ದೋಚಲಾಗಿದೆ. ಈಗ ರಾಷ್ಟ್ರಧ್ವಜದಲ್ಲೂ ದುಡ್ಡು ಮಾಡುವ ಹೀನ ಬುದ್ಧಿ ಯಾಕೆ? ಮೋದಿಯವರಿಗೆ ದೇಶಾಭಿಮಾನ ಹೃದಯದಲ್ಲಿದ್ದರೆ ರಾಷ್ಟ್ರಧ್ವಜವನ್ನು ಪುಕ್ಕಟೆ ಕೊಡಲು ಏನು ರೋಗ ಎಂದು ವಾಗ್ದಾಳಿ ನಡೆಸಿದ್ದಾರೆ.