ರಾಯಚೂರು, ಆ 11 (DaijiworldNews/DB): ಯಾರೋ ಒಂದಿಬ್ಬರು ಹೇಳಿದ ಮಾತ್ರಕ್ಕೆ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ. ಬದಲಾವಣೆ ಮಾತುಗಳು ಕೇವಲ ಊಹಾಪೋಹ ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಮಂತ್ರಾಲಯ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಷ್ಟ್ರ, ರಾಜ್ಯದ ಅಧ್ಯಕ್ಷರು ಕೂಡಾ ಬೊಮ್ಮಾಯಿಯವರೇ ಸಿಎಂ ಆಗ ಅವಧಿ ಪೂರ್ಣಗೊಳಿಸಲಿದ್ದಾರೆಂದು ಹೇಳಿದ್ದಾರೆ. ಬೊಮ್ಮಾಯಿ ನೇತೃತ್ವದಲ್ಲೇ ಮುಂದಿನ ವಿಧಾನಸಭಾ ಚುನಾವಣೆ ಎದುರಿಸುತ್ತೇವೆ. ಆ ನಂಬಿಕೆ ನಮಗಿದೆ ಎಂದರು.
ಬಿಜೆಪಿ ರಾಜ್ಯದಲ್ಲಿ ಮತ್ತೊಮ್ಮೆ ಅಧಿಕಾರಕ್ಕೆ ಬರುವುದಕ್ಕೆ ನಾವೆಲ್ಲರೂ ಶ್ರಮಿಸುತ್ತೇವೆ. ರಾಜ್ಯಾದ್ಯಂತ ಪ್ರವಾಸ ಹಮ್ಮಿಕೊಂಡಿದ್ದೇವೆ. ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿಯವರ ನೇತೃತ್ವದಲ್ಲೊಂದು ತಂಡ, ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಒಂದು ತಂಡ ರಚಿಸುವ ಯೋಜನೆ ರೂಪಿಸಲಾಗುತ್ತಿದೆ. ರಾಜ್ಯ ಪ್ರವಾಸ ಕುರಿತು ನಾಯಕರೆಲ್ಲಾ ಸೇರಿ ರೂಪುರೇಷೆ ಸಿದ್ದಪಡಿಸಲಾಗುವುದು ಎಂದವರು ತಿಳಿಸಿದರು.
ಸಚಿವ ಅಶ್ವತ್ ನಾರಾಯಣ ಅವರು ನಕಲಿ ಸರ್ಟಿಫಿಕೇಟ್ ರಾಜ ಎಂಬ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಚುನಾವಣೆ ಸನಿಹವಾದಂತೆ ಇಂತಹ ಹೇಳಿಕೆಗಳೆಲ್ಲ ಬರುವುದು ಸಹಜ. ಅದಕ್ಕೆ ಅಶ್ವತ್ ನಾರಾಯಣ ಅವರೇ ಉತ್ತರ ನೀಡುತ್ತಾರೆ ಎಂದರು.