ಮೈಸೂರು, ಆ 11 (DaijiworldNews/DB): ಮುಖ್ಯಮಂತ್ರಿ ಬದಲಾವಣೆ ಎಂಬುದು ಕಾಂಗ್ರೆಸ್ ಕೃಪಾ ಪೋಷಿತ ನಾಟಕ ಮಂಡಳಿ ಸೃಷ್ಟಿಸಿದ ದೊಡ್ಡ ಸುಳ್ಳು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಹೇಳಿದ್ದಾರೆ.
ಮೈಸೂರಿನಲ್ಲಿ ಮಾತನಾಡಿದ ಅವರು, ಊಹಾಪೋಹ ಸೃಷ್ಟಿಸುವುದೇ ಕಾಂಗ್ರೆಸ್ ಕೆಲಸ. ಅದರಲ್ಲಿ ಮುಖ್ಯಮಂತ್ರಿ ಬದಲಾವಣೆ ವಿಚಾರವೂ ಒಂದು. ಒಳ ಬೇಗುದಿ ಆ ಪಕ್ಷದಲ್ಲಿ ಹೆಚ್ಚಾಗಿದೆ. ಅದನ್ನು ಶಮನ ಮಾಡಿಕೊಳ್ಳುವುದಕ್ಕಾಗಿ ಬಿಜೆಪಿ ಮೇಲೆ ಬಾಣ ಪ್ರಯೋಗಿಸಿ ಇಲ್ಲಸಲ್ಲದನ್ನು ಸೃಷ್ಟಿ ಮಾಡುತ್ತಿದ್ದಾರೆ ಎಂದರು.
ಸಿದ್ದರಾಮಯ್ಯಗೆ ಡಿಕೆಶಿ, ಡಿಕೆಶಿಗೆ ಸಿದ್ದರಾಮಯ್ಯ ಟೋಪಿ ಹಾಕುವುದರಲ್ಲೇ ಮಗ್ನರಾಗಿದ್ದಾರೆ. ಅವರು ಇವರ ಮೇಲೆ, ಇವರು ಅವರ ಮೇಲೆ ಪರಸ್ಪರ ಆಪಾದನೆಯಲ್ಲಿ ತೊಡಗಿದ್ದಾರೆ. ಅದನ್ನು ಮುಚ್ಚಿಕೊಳ್ಳಲು ಬಿಜೆಪಿ ಮೂಲೆ ಗೂಬೆ ಕೂರಿಸುವ ಪ್ರಯತ್ನ ಕಾಂಗ್ರೆಸ್ನವರದ್ದು ಎಂದವರು ವ್ಯಂಗ್ಯವಾಡಿದರು.
ಕಾಂಗ್ರೆಸ್ನಲ್ಲಿ ಬೆಂಕಿಯಾಗಿ ಹೊತ್ತಿಕೊಂಡ ಸಿದ್ದರಾಮೋತ್ಸವ ಕಿಡಿಯನ್ನು ಬೇರೆಡೆ ಸೆಳೆಯಲು ಸಿಎಂ ಬದಲಾವಣೆ ವದಂತಿ ಸೃಷ್ಟಿಸಲಾಗಿದೆ. ಮೂರನೇ ಸಿಎಂ ಪ್ರಸ್ತಾಪವೇ ಬಿಜೆಪಿಯಲ್ಲಿ ಇಲ್ಲ. ವರಿಷ್ಠರು ಈಗಾಗಲೇ ಬೊಮ್ಮಾಯಿಯವರ ಕಾರ್ಯವನ್ನು ಮೆಚ್ಚಿಕೊಂಡಿದ್ದು, ಯಾವುದೇ ಕಾರಣಕ್ಕೂ ಸಿಎಂ ಬದಲಾವಣೆ ಆಗುವುದಿಲ್ಲ ಎಂದವರು ಇದೇ ವೇಳೆ ಸ್ಪಷ್ಟಪಡಿಸಿದರು.
ಸಿದ್ದರಾಮೋತ್ಸವದಂತಹ ಹಲವು ಕಾರ್ಯಕ್ರಮ ಮಾಡುವ ಶಕ್ತಿ ಬಿಜೆಪಿಗಿದೆ. ಆದರೆ ನಮಗೆ ಅವರ ಕಾರ್ಯಕ್ರಮದಿಂದ ಯಾವುದೇ ಭಯ ಇಲ್ಲ. ತಾಕತ್ತಿದ್ದರೆ ಆ ಕಾರ್ಯಕ್ರಮದಲ್ಲಿ ಎಷ್ಟು ಜನ ಸೇರಿದ್ದರು ಎಂಬುದನ್ನು ಬಹಿರಂಗಪಡಿಸಲಿ ಎಂದು ಇದೇ ವೇಳೆ ಎಸ್.ಟಿ. ಸೋಮಶೇಖರ್ ಸವಾಲೆಸೆದರು.