ನವದೆಹಲಿ, ಆ 10 (DaijiworldNews/DB): ಬಿಜೆಪಿ ಮಾಜಿ ವಕ್ತಾರೆ ನೂಪುರ್ ಶರ್ಮಾ ವಿರುದ್ದ ವಿವಿಧ ರಾಜ್ಯಗಳಲ್ಲಿ ದಾಖಲಾಗಿದ್ದ ಪ್ರಕರಣಗಳನ್ನು ಸುಪ್ರೀಂ ಕೋರ್ಟ್ ದೆಹಲಿಗೆ ವರ್ಗಾಯಿಸಿದೆ. ಆ ಮೂಲಕ ನೂಪರ್ ಶರ್ಮಾಗೆ ಬಿಗ್ ರಿಲೀಫ್ ನೀಡಿದೆ.
ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಹೇಳಿಕೆ ನೀಡಿದ ಪ್ರಕರಣದಲ್ಲಿ ನೂಪುರ್ ಬಂಧನಕ್ಕೆ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಜೆಮ್ಷೆಡ್ ಪರ್ಡಿವಾಲಾ ಅವರ ಪೀಠವು ಜುಲೈ 19ರಂದ ತಡೆ ನೀಡಿತ್ತು. ಇದೀಗ ಎಂಟು ರಾಜ್ಯಗಳಲ್ಲಿ ನೂಪುರ್ ವಿರುದ್ದ ದಾಖಲಾಗಿದ್ದ ಎಫ್ಐಆರ್ಗಳನ್ನ ದೆಹಲಿಗೆ ವರ್ಗಾಯಿಸಲು ನೋಟಿಸ್ ನೀಡಲಾಗಿದೆ.
ನೂಪುರ್ ಪರ ವಕೀಲ ಮಣಿಂದರ್ ಸಿಂಗ್ ಅವರು, ಎಲ್ಲಾ ಪ್ರಕರಣಗಳನ್ನ ದೆಹಲಿಗೆ ವರ್ಗಾಯಿಸುವಂತೆ ವಿಚಾರಣೆ ಸಮಯದಲ್ಲಿ ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿ ನೀಡಿದರು. ಎಫ್ಐಆರ್ ರದ್ದುಗೊಳಿಸಲು ದೆಹಲಿ ಹೈಕೋರ್ಟ್ನಲ್ಲಿ ಅರ್ಜಿಗೆ ಅವಕಾಶ ನೀಡಬೇಕು ಎಂದು ಮಣಿಂದರ್ ಹೇಳಿದರು. ಇದರ ಬಗ್ಗೆ, ನ್ಯಾಯಾಧೀಶರು ಹೌದು, ಅದನ್ನು ಮಾಡಲಾಗುವುದು ಎಂದರು.
ಪಶ್ಚಿಮ ಬಂಗಾಳದ ವಕೀಲೆ ಮೇನಕಾ ಗುರುಸ್ವಾಮಿ ಮಾತನಾಡಿ ಮೊದಲ ಎಫ್ಐಆರ್ ದಾಖಲಾಗಿರುವುದು ದೆಹಲಿಯಲ್ಲಿ ಮತ್ತು ಇದರಲ್ಲಿ ನೂಪುರ್ ದೂರುದಾರರೇ ಹೊರತು ಆರೋಪಿಯಲ್ಲ. ಮೊದಲ ಎಫ್ಐಆರ್ ಮುಂಬೈನಿಂದ ಬಂದಿರುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಮಣಿಂದರ್ ಸಿಂಗ್, ನೂಪುರ್ ಅವರಿಗೆ ಜೀವ ಬೆದರಿಕೆ ಇರುವ ಹಿನ್ನೆಲೆಯಲ್ಲಿ ದೆಹಲಿಗೆ ಪ್ರಕರಣಗಳನ್ನು ವರ್ಗಾಯಿಸಲು ಮನವಿ ಸಲ್ಲಿಸಲಾಗಿದೆ ಮತ್ತು ಇದಕ್ಕೆ ನ್ಯಾಯಪೀಠ ಒಪ್ಪಿದೆ ಎಂದರು. ಇದಕ್ಕೆ ಮೇನಕಾ ಆಕ್ಷೇಪಿಸಿ ಈ ಹಿಂದೆ ಇದೇ ಕೋರಿಕೆಯನ್ನು ತಿರಸ್ಕರಿಸಲಾಗಿತ್ತು. ಜಂಟಿ ಎಸ್ಐಟಿ ರಚಿಸುವುದು ಉತ್ತಮ ಎಂದರು.
ನ್ಯಾಯಮೂರ್ತಿ ಸೂರ್ಯಕಾಂತ್ ತಮ್ಮ ಆದೇಶದಲ್ಲಿ ಅರ್ಜಿದಾರರು ತಮ್ಮ ವಿರುದ್ದ ದಾಖಲಾಗಿರುವ ಎಫ್ಐಆರ್ ರದ್ದತಿ ಕೋರಿ ಮತ್ತು ಎಲ್ಲವನ್ನೂ ದೆಹಲಿಗೆ ವರ್ಗಾಯಿಸಲು ಕೋರಿ ಮನವಿ ಸಲ್ಲಿಸಿದ್ದರು. ಹಿಂದೆ ತಿರಸ್ಕರಿಸಿದ್ದರೂ ಬಳಿಕ ಹೊಸ ಸಂಗತಿಗಳು ನಮಗೆ ಮನದಟ್ಟಾಗಿವೆ. ಆದರೆ ಎಫ್ಐಆರ್ ರದ್ದತಿ ಸಂಬಂಧಿಸಿ ಯಾವ ಆದೇಶ ನೀಡುತ್ತಿಲ್ಲ. ಅರ್ಜಿದಾರರ ಜೀವಕ್ಕೆ ಅಪಾಯವಿರುವ ಹಿನ್ನೆಲೆಯಲ್ಲಿ ಅರ್ಜಿ ಪರಿಗಣಿಸಿದ್ದೇವೆ ಎಂದರು.