ತಿರುವನಂತಪುರಂ, ಆ 10 (DaijiworldNews/DB): ಕೇರಳದ ಮಲಪ್ಪುರಂನಲ್ಲಿ ತಾಯಿ ಮತ್ತು ಮಗ ಇಬ್ಬರು ಒಟ್ಟಿಗೆ ಸಾರ್ವಜನಿಕ ಸೇವಾ ಆಯೋಗದ (ಪಿಎಸ್ಸಿ) ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಆ ಮೂಲಕ ಸಾಧನೆಗೆ ವಯಸ್ಸಿನ ಹಂಗಿಲ್ಲ ಎಂಬುದನ್ನು ತೋರಿಸಿಕೊಟ್ಟಿದ್ದಾರೆ.
42 ವರ್ಷದ ತಾಯಿ ಬಿಂದು ಮತ್ತು ಆಕೆಯ 24 ವರ್ಷದ ಮಗ ವಿವೇಕ್ ಪಿಎಸ್ಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದವರು. ಇಬ್ಬರೂ ಒಟ್ಟಿಗೇ ಕೋಚಿಂಗ್ ಕ್ಲಾಸ್ಗೆ ಹೋಗಿದ್ದರು. ಶಿಕ್ಷಕರಿಂದ ಪ್ರೇರಣೆ ಸಿಕ್ಕಿದ್ದರಿಂದ ಒಟ್ಟಿಗೇ ಓದು ಮುಂದುವರಿಸಿದರು. ಇದೀಗ ತಾಯಿ ಮಗ ಇಬ್ಬರೂ ಪರೀಕ್ಷೆ ಬರೆದು ಒಟ್ಟಿಗೇ ತೇರ್ಗಡೆ ಹೊಂದಿದ್ದಾರೆ. ಬಿಂದು ಲೋವರ್ ಡಿವಿಜನಲ್ ಕ್ಲರ್ಕ್ (ಎಲ್ಡಿಸಿ) ಪರೀಕ್ಷೆಯಲ್ಲಿ 38ನೇ ಶ್ರೇಣಿ, ವಿವೇಕ್ 92ನೇ ಶ್ರೇಣಿಯೊಂದಿಗೆ ಕೊನೆಯ ದರ್ಜೆಯ ಸೇವಕರ (ಎಲ್ಜಿಸಿ) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ್ದಾರೆ. ಮಗ ಎಸೆಸ್ಸೆಲ್ಸಿ ಓದುತ್ತಿದ್ದಾಗ ಆತನಿಗೆ ಪ್ರೋತ್ಸಾಹಿಸಲೆಂದು ಪುಸ್ತಕ ಓದಲು ಪ್ರಾರಂಭಿಸಿದ ತಾಯಿಗೆ ಕೇರಳ ಪಿಎಸ್ಸಿ ಪರೀಕ್ಷೆ ಬರೆಯುವಲ್ಲಿ ಪ್ರೇರೇಪಣೆ ನೀಡಿದೆ.
ನಾನು, ತಾಯಿ ಇಬ್ಬರೂ ಒಟ್ಟಿಗೇ ಕೋಚಿಂಗ್ಗೆ ಹೋಗುತ್ತಿದ್ದೆವು. ತಂದೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿಕೊಟ್ಟಿದ್ದರು. ಒಟ್ಟಿಗೇ ಅರ್ಹತೆ ಗಳಿಸುತ್ತೇವೆ ಎಂದು ಯೋಚಿಸಿಯೇ ಇರಲಿಲ್ಲ. ಈಗ ಇಬ್ಬರಿಗೂ ಒಟ್ಟಿಗೇ ಅರ್ಹತೆ ಸಿಕ್ಕಿರುವುದು ತುಂಬಾ ಖುಷಿಯಾಗುತ್ತಿದೆ ಎಂದು ಮಗ ವಿವೇಕ್ ಹೇಳಿದ್ದಾರೆ.
ಕಳೆದೊಂದು ದಶಕದಿಂದ ಅಂಗನವಾಡಿ ಕೇಂದ್ರದಲ್ಲಿ ನಾನು ಪಾಠ ಮಾಡುತ್ತಿದ್ದೇನೆ. ಸ್ನೇಹಿತರು, ಮಗ ಮತ್ತು ಕೋಚಿಂಗ್ ಸೆಂಟರ್ನ ಬೋಧಕ ಸಿಬಂದಿಯ ನಿರಂತರ ಪ್ರೇರಣೆಯೇ ನಾನು ಪರೀಕ್ಷೆ ಪಾಸಾಗಲು ಸಾಧ್ಯವಾಯಿತು ಎಂದು ತಾಯಿ ಬಿಂದು ತಿಳಿಸಿದ್ದಾರೆ.