ಮಥುರಾ(ಉತ್ತರ ಪ್ರದೇಶ), ಆ 10 (DaijiworldNews/DB): ಅನೈತಿಕ ಸಂಬಂಧ ಪ್ರಶ್ನಿಸಿದ್ದ ಪತಿಯನ್ನು ಪತ್ನಿಯೇ ಬೆಂಕಿ ಹಚ್ಚಿ ಕೊಂದಿರುವ ಘಟನೆ ಮಥುರಾ ಜಿಲ್ಲೆಯ ಕೋಸಿಕಲನ್ ಪಟ್ಟಣದಲ್ಲಿ ನಡೆದಿದೆ.
ರೇಖಾ ಪತಿಯನ್ನು ಬೆಂಕಿ ಹಚ್ಚಿ ಕೊಂದ ಹಂತಕಿ. ಈಕೆ ಪರ ಪುರುಷನೊಂದಿಗೆ ಸಂಬಂಧ ಹೊಂದಿದ್ದ ವಿಷಯ ಪತಿ ಚಮನ್ಪ್ರಕಾಶ್ಗೆ ತಿಳಿದು ಆತ ಪತ್ನಿಯ ಬಳಿ ಈ ಕುರಿತು ಪ್ರಶ್ನೆ ಮಾಡಿದ್ದಾನೆ. ಬಳಿಕ ಇದೇ ವಿಷಯವಾಗಿ ದಂಪತಿ ನಡುವೆ ಗಲಾಟೆ ನಡೆದಿದೆ. ಸೋಮವಾರ ಸಂಜೆ ಪತಿ ಚಮನ್ ನಿದ್ರಿಸುತ್ತಿದ್ದ ವೇಳೆ ಆತನ ಮೇಲೆ ಪತ್ನಿ ರೇಖಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ ಎಂದು ತಿಳಿದು ಬಂದಿದೆ.
ಆತನ ಬೊಬ್ಬೆ ಕೇಳಿ ಸನಿಹದ ಮನೆಯವರು ಓಡಿ ಬಂದಿದ್ದು, ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ತೀವ್ರ ಸುಟ್ಟ ಗಾಯಗಳಿಂದಾಗಿ ಆತ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದಿದ್ದಾನೆ.
ಪ್ರಕರಣದ ಕುರಿತು ಕೋಸಿಕಲನ್ ಪೊಲೀಸ್ ಠಾಣೆಯಲ್ಲಿ ಮೃತನ ಸಂಬಂಧಿಕರು ದೂರು ನೀಡಿದ್ದು, ಆತನ ಪತ್ನಿ ರೇಖಾಳ ವಿರುದ್ದ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಶೀಘ್ರ ಆಕೆಯನ್ನು ಬಂಧಿಸಲಾಗುವುದು ಎಂದು ಕೋಸಿಕಲನ್ ಪೊಲೀಸ್ ಠಾಣೆ ಪ್ರಭಾರಿ ಅನುಜ್ ಕುಮಾರ್ ತಿಳಿಸಿದ್ದಾರೆ.