ಬೆಂಗಳೂರು, ಆ 10 (DaijiworldNews/MS): ಸಿಎಂ ಬದಲಾವಣೆಯ ಕುರಿತು ಕಾಂಗ್ರೆಸ್ ಟ್ವೀಟ್ ಮಾಡಿ ರಾಜ್ಯ ರಾಜಕೀಯದಲ್ಲಿ ಭಾರೀ ವಿವಾದವನ್ನು ಸೃಷ್ಟಿಸಿ ಬಿಜೆಪಿಗರ ಗಮನ ಸೆಳೆದ ಕೈ ಪಕ್ಷ , ಇಂದು ಮತ್ತೊಮ್ಮೆ ಟ್ವೀಟ್ ಅಸ್ತ್ರವನ್ನು ಪ್ರಯೋಗಿಸಿದೆ. "ಬಿಜೆಪಿ ಹೈಕಮಾಂಡ್ ಪಾಲಿಗೆ ಕರ್ನಾಟಕದ ಮುಖ್ಯಮಂತ್ರಿಗಳೆಂದರೆ ಪಪ್ಪೆಟ್ ಸಿಎಂ ಇದ್ದಂತೆ " ಎಂದು ಲೇವಡಿ ಮಾಡಿದೆ.
ಬಿ.ಎಸ್.ಯಡಿಯೂರಪ್ಪ ಅವರಂಥ ನಾಯಕರನ್ನೇ ಹೇಳದೆ ಕೇಳದೆ ಮನೆಗೆ ಕಳಿಸಿರುವಾಗ ‘ಬೊಂಬೆ ಬೊಮ್ಮಾಯಿ’ ಯಾವ ಲೆಕ್ಕ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ‘ಸಂತೋಷ ಕೂಟ’ಕ್ಕೆ ಸಂತೋಷಪಡಿಸುವ ಬೊಮ್ಮಾಯಿಯವರ ಪ್ರಯತ್ನ ವಿಫಲವಾಗಿದೆ. ಹಗರಣ ಮತ್ತು ವೈಫಲ್ಯಗಳ ಕೊಡ ತುಂಬಿದೆ ಎಂದು ವ್ಯಂಗ್ಯವಾಡಿದೆ.
ಈ ಹಿಂದೆ ಯಡಿಯೂರಪ್ಪ ಅವರನ್ನು ಸರ್ಕಾರದ ಎರಡನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದ ಸಂದರ್ಭದಲ್ಲೇ ಕಣ್ಣೀರು ಹಾಕಿಸಿ ಕಳಿಸಲಾಗಿತ್ತು. ಈಗ ಬೊಮ್ಮಾಯಿ ಅವರನ್ನು 1ನೇ ವಾರ್ಷಿಕೋತ್ಸವದ ಹೊತ್ತಲ್ಲಿ ಕೆಳಗಿಳಿಸಲು ವೇದಿಕೆ ಸಜ್ಜಾಗುತ್ತಿದೆ. 1 ವರ್ಷದಲ್ಲಿ 12 ಬಾರಿ ದೆಹಲಿ ಪ್ರವಾಸ ಕೈಗೊಂಡರೂ ಕೈಗೊಂಬೆ ಮುಖ್ಯಮಂತ್ರಿಗೆ ಸಂಪುಟ ಸಂಕಟ ಬಗೆಹರಿಸಲು ಸಾಧ್ಯವಾಗಿಲ್ಲ ಎಂದು ಕಾಂಗ್ರೆಸ್ ಪಕ್ಷವು ಟ್ವೀಟ್ ಮೂಲಕವೇ ಟಾಂಗ್ ಕೊಟ್ಟಿದೆ.