ಬೆಂಗಳೂರು, ಆ 10 (DaijiworldNews/MS): ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾಗಲಿದೆ, ಮೂರನೇ ಸಿಎಂ ಬರುತ್ತಾರೆ ಎಂಬ ಕಾಂಗ್ರೆಸ್ ಆರೋಪಕ್ಕೆ ಬಿಜೆಪಿ ಮುಖಂಡರು ತಿರುಗೇಟು ನೀಡಿ ಸಿಎಂ ಬೊಮ್ಮಾಯಿ ಪರ ಹೇಳಿಕೆ ನೀಡಲಾರಂಭಿಸಿದ್ದಾರೆ.
ಬಿಜೆಪಿಯ ನಾಯಕತ್ವವನು ಟೀಕಿಸಿ ನಿನ್ನೆ ಕಾಂಗ್ರೆಸ್ ಸೋಷಿಯಲ್ ಮೀಡಿಯಾದಲ್ಲಿ ಸರಣಿ ಟ್ವೀಟ್ ಗಳನ್ನು ಮಾಡಿತ್ತು. ಇದಕ್ಕೆ ಕಾಂಗ್ರೆಸ್ ಗೆ ತಿರುಗೇಟು ನೀಡಿರುವ ಕಂದಾಯ ಸಚಿವ ಆರ್ ಅಶೋಕ್, 2023ರ ವಿಧಾನಸಭೆ ಚುನಾವಣೆ ತನವೂ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುವುದಿಲ್ಲ, ಸಿಎಂ ಬೊಮ್ಮಾಯಿ ನೇತೃತ್ವದಲ್ಲಿಯೇ ಚುನಾವಣೆ ಎದುರಿಸಲಿದ್ದೇವೆ ಎಂದು ತಿಳಿಸಿದ್ದಾರೆ.
ಆಶೋಕ್ ಮಾತ್ರವಲ್ಲದೇ ಸುನಿಲ್ ಕುಮಾರ್ , ಸಿ.ಸಿ ಪಾಟೀಲ್ , ಡಾ ಸುಧಾಕರ್ , ಎಸ್ .ಟಿ. ಸೋಮಶೇಖರ್ ಹೇಗೆ ಹಲವಾರು ನಾಯಕರು ಸಿಎಂ ಪರ ಬ್ಯಾಟ್ ಬೀಸಿದ್ದರು.
ಶರ್ಟ್ ಬದಲಾಯಿಸುವಂತೆ ಹಿಂದೆ ವೀರೇಂದ್ರ ಪಾಟೀಲ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾವಣೆ ಮಾಡುವ ಸ್ಥಿತಿ ಇರುವುದು ಕಾಂಗ್ರೆಸ್ ನಲ್ಲಿ ಎಂದು ಡಾ ಸುಧಾಕರ್ ಲೇವಡಿ ಮಾಡಿದರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಕಾಂಗ್ರೆಸ್ ಪಕ್ಷದವರು ತಮ್ಮ ಒಳಜಗಳವನ್ನು ಮುಚ್ಚಿಡಲು ಉತ್ಸವ, ಪಾದಯಾತ್ರೆ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಬದಲಾವಣೆಯ ಕುರಿತು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಹೇಳಿದ್ದರು.