ಬೆಂಗಳೂರು, ಆ 10 (DaijiworldNews/DB): ಬಿಹಾರದ ರಾಜಕೀಯ ಬೆಳವಣಿಗೆಗಳನ್ನು ನೋಡಿದಾಗ ಜನತಾದಳ ಪರಿವಾರ ಒಮದೇ ಸೂರಿನಡಿ ಇದ್ದ ದಿನಗಳನ್ನು ಯೋಚಿಸುವಂತೆ ಮಾಡುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಬಿಹಾರದಲ್ಲಿನ ರಾಜಕೀಯ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ದೇಶಕ್ಕೆ ಮೂರು ಪ್ರಧಾನಿಗಳನ್ನು ನೀಡಿದ್ದೇ ಜನತಾ ಪರಿವಾರ. ಒಂದೇ ಸೂರಿನಡಿ ಜನತಾ ಪರಿವಾರ ಇದ್ದಾಗ ಇದು ಸಾಧ್ಯವಾಯಿತು ಎಂದಿದ್ದಾರೆ.
ಬಿಜೆಪಿಗೆ ಪರ್ಯಾಯವಾಗಿ ಬೆಳೆಯುವ ಶಕ್ತಿ ಜನತಾ ಪರಿವಾರಕ್ಕಿದೆ. ಹೀಗಾಗಿ ಯುವ ಪೀಳಿಗೆ ಈ ದೇಶಕ್ಕೆ ಉತ್ತಮವಾದ ಪರ್ಯಾಯ ನೀಡುವ ನಿರ್ಧಾರಕ್ಕೆ ಬಂದರೆ ದೇಶದ ಭವಿಷ್ಯದ ದೃಷ್ಟಿಯಿಂದ ಉತ್ತಮವಾಗಿರುತ್ತದೆ ಎಂದವರು ಸಲಹೆ ಮಾಡಿದ್ದಾರೆ.