ಹುಬ್ಬಳ್ಳಿ, ಆ 10 (DaijiworldNews/DB): ಆರೆಸ್ಸೆಸ್ನ ಗೋಳ್ವಾಲ್ಕರ್ ಮತ್ತು ಸಾವರ್ಕರ್ ರಾಷ್ಟ್ರಧ್ವಜ ವಿರೋಧಿಸಿದ್ದರು. ಆದರೆ ಅದೇ ಸಂಘದ ಪಕ್ಷದವರು ಈಗ ಮನೆಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನ ಮಾಡುವ ಮೂಲಕ ಡೋಂಗಿ ರಾಜಕೀಯ ಮಾಡುತ್ತಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಬುಧವಾರ ಮಾತನಾಡಿದ ಅವರು, ಡೋಂಗಿ ರಾಷ್ಟ್ರಭಕ್ತಿ ಸರಿಯಲ್ಲ. ಆರೆಸ್ಸೆಸ್ನವರು ತಮ್ಮ ಕಚೇರಿ ಮೇಲೆ ರಾಷ್ಟ್ರಧ್ವಜ ಹಾರಿಸಲು ಸಿದ್ದರಿದ್ದಾರೆಯೇ? ಅಭಿಯಾನದ ಅಂಗವಾಗಿ ಧ್ವಜ ಹಾರಿಸುತ್ತಾರೆಯೇ? ಎಂದವರು ಪ್ರಶ್ನಿಸಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದವರು ಕೇವಲ ರಾಷ್ಟ್ರಧ್ವಜ ಮಾತ್ರವಲ್ಲ, ಸಂವಿಧಾನ, ಪ್ರಜಾಪ್ರಭುತ್ವವನ್ನೂ ವಿರೋಧಿಸಿದ್ದರು. ಗೋಳ್ವಾಲ್ಕರ್ ಮತ್ತು ಸಾವರ್ಕರ್ ಇಬ್ಬರೂ ರಾಷ್ಟ್ರಧ್ವಜವನ್ನು ವಿರೋಧಿಸಿದ್ದರು ಎಂದರು.
ಬಿಹಾರ ಸಿಎಂ ನಿತೀಶ್ಕುಮಾರ್ ಮತ್ತು ಎನ್ಡಿಎ ಮೈತ್ರಿ ಬಿರುಕಿನ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಬಿರುಕಿನ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಕೋಮುವಾದಿ ಪಕ್ಷದೊಂದಿಗೆ ಮೈತ್ರಿ ತೊರೆದಿರುವುದು ಮತ್ತು ಆರ್ಜೆಡಿ ಹಾಗೂ ಕಾಂಗ್ರೆಸ್ ಜೊತೆಗೆ ಕೈ ಜೋಡಿಸಿ ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ತಿಳಿಸಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕೆನ್ನುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ತಮ್ಮ ಕ್ಷೇತ್ರಕ್ಕೆ ಬನ್ನಿ ಎಂದು ಹಲವರು ಕರೆಯುತ್ತಿದ್ದಾರೆ. ಆದರೆ ಎಲ್ಲಾ ಕಡೆ ಸ್ಪರ್ಧಿಸುವುದಕ್ಕೆ ಆಗುವುದಿಲ್ಲ. ಕ್ಷೇತ್ರ ಆಯ್ಕೆ ಬಗ್ಗೆ ಇನ್ನಷ್ಟೇ ತೀರ್ಮಾನಿಸಲಾಗುವುದು ಎಂದರು.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಗೊತ್ತಿಲ್ಲ. ಆ ಬಗ್ಗೆ ಯಾರು ಹೇಳಿದ್ದಾರೋ ಅವರನ್ನೇ ಕೇಳಬೇಕು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.