ಬೆಂಗಳೂರು, ಆ 09 (DaijiworldNews/SM): ಸಿಎಂ ಬದಲಾವಣೆ ವಿಚಾರದಲ್ಲಿ ಕಾಂಗ್ರೆಸ್ ಪಕ್ಷದವರು ಹಲವು ರೀತಿಯಲ್ಲಿ ವದಂತಿ ಹಬ್ಬಿಸುತ್ತಿದ್ದು ಇವರ ವಿರುದ್ಧ ಸಚಿವ ಸುನೀಲ್ ಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. 40% ಸರ್ಕಾರದಲ್ಲಿ ‘3ನೇ ಸಿಎಂ’ ಸೀಟು ಹತ್ತುವ ಸನ್ನಿಹಿತವಾಗಿದೆ ಎಂದು ಟ್ವೀಟ್ ಮೂಲಕ ಸಿಎಂ ಬಗ್ಗೆ ಕಾಂಗ್ರೆಸ್ ವ್ಯಂಗ್ಯವಾಡಿದ ಬೆನ್ನಲ್ಲೇ ಬಿಜೆಪಿ ನಾಯಕರು ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಸಿಎಂ ಬದಲಾವಣೆ ಎಂಬ ವದಂತಿಗೆ ಸಚಿವ ಸುನಿಲ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಮನೆಯೇ ಕೆಟ್ಟು ಹೋಗಿದೆ. ಇಂಥ ಮನೆಕೆಟ್ಟು ಹೋದ ಕಾಂಗ್ರೆಸ್ ಗೆ ಉಳಿದವರ ಮನೆ ಕೆಡಿಸುವುದು ಹೇಗೆ, ಬಿಜೆಪಿ ಮನೆ ಕೆಡಿಸುವುದು ಹೇಗೆ ಎಂಬ ಚಿಂತೆ ಉಂಟಾಗಿದೆ. ನಮ್ಮ ಸರ್ಕಾರದ ಸಾಧನೆಗಳ ಬಗ್ಗೆ ಕಾಂಗ್ರೆಸ್ ಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಕೇವಲ ಊಹಾಪೋಹಗಳ ಮೇಲೆ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗುತ್ತೇವೆ ಎಂದು ಹೈಕಮಾಂಡ್ ಹೇಳಿದೆ. ನಿಮಗೆ ತಾಕತ್ತು ಇದ್ದರೆ ಯಾರ ನೇತೃತ್ವದಲ್ಲಿ ಚುನಾವಣೆ ಹೋಗುತ್ತೀರಿ ಎನ್ನುವುದನ್ನು ಹೇಳಿ ಎಂದು ಕಾಂಗ್ರೆಸ್ ಸವಾಲು ಹಾಕಿದ್ದಾರೆ.