ನವದೆಹಲಿ, ಆ 09 (DaijiworldNews/SM): ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಆಸ್ತಿ ವಿವರ ಬಹಿರಂಗವಾಗಿದೆ. ಮೋದಿಯವರು 2.23 ಕೋಟಿ ರೂ.ಗೂ ಹೆಚ್ಚು ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ ಎಂಬುವುದು ಬಹಿರಂಗಗೊಂಡಿದೆ.
ಪ್ರಧಾನಿ ಅವರ ಆಸ್ತಿಯ ವಿವರ ಎಲ್ಲವೂ ಬಹುತೇಕ ಬ್ಯಾಂಕ್ ಠೇವಣಿಗಳಾಗಿವೆ. ಆದರೆ ಅವರು ಗಾಂಧಿನಗರದ ಒಂದು ತುಂಡು ಭೂಮಿಯಲ್ಲಿ ತಮ್ಮ ಪಾಲನ್ನು ದಾನ ಮಾಡಿರುವುದರಿಂದ ಯಾವುದೇ ಸ್ಥಿರ ಆಸ್ತಿಯನ್ನು ಹೊಂದಿಲ್ಲ ಎಂದು ಅವರು ಇತ್ತೀಚಿನ ಆಸ್ತಿ ವಿವರ ಬಹಿರಂಗಪಡಿಸಿದ್ದಾರೆ.
ಅವರು ಯಾವುದೇ ಬಾಂಡ್, ಷೇರು ಅಥವಾ ಮ್ಯೂಚುವಲ್ ಫಂಡ್ಗಳಲ್ಲಿ ಯಾವುದೇ ಹೂಡಿಕೆಯನ್ನು ಹೊಂದಿಲ್ಲ. ಯಾವುದೇ ವಾಹನವನ್ನು ಹೊಂದಿಲ್ಲ. ಆದರೆ 1.73 ಲಕ್ಷ ರೂ. ಮೌಲ್ಯದ ನಾಲ್ಕು ಚಿನ್ನದ ಉಂಗುರಗಳನ್ನು ಹೊಂದಿದ್ದಾರೆ ಎಂದು ಅವರ ಘೋಷಣೆಯ ಪ್ರಕಾರ ಮಾರ್ಚ್ 31 ರವರೆಗೆ ನವೀಕರಿಸಿರುವ ಆಸ್ತಿ ವಿವರದಲ್ಲಿ ತಿಳಿದುಬಂದಿದೆ.
ಪಿಎಂ ಮೋದಿಯವರ ಚರ ಆಸ್ತಿಯು ಒಂದು ವರ್ಷದಲ್ಲಿ 26.13 ಲಕ್ಷ ರೂ. ಹೆಚ್ಚಾಗಿದೆ. ಆದರೆ ಅವರ ಬಳಿ ಮಾರ್ಚ್ 31, 2021 ರಂತೆ ಇದ್ದ 1.1 ಕೋಟಿ ರೂ. ಮೌಲ್ಯದ ಸ್ಥಿರ ಆಸ್ತಿಯನ್ನು ಆಗ ಹೊಂದಿಲ್ಲ. ಪ್ರಧಾನ ಮಂತ್ರಿಗಳ ಕಚೇರಿ(PMO) ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾದ ವಿವರಗಳ ಪ್ರಕಾರ ಮಾರ್ಚ್ 31, 2022 ರಂತೆ ಅವರ ಒಟ್ಟು ಆಸ್ತಿ ಮೌಲ್ಯ 2,23,82,504 ರೂ.