ನವದೆಹಲಿ, ಆ 09 (DaijiworldNews/SM): ಎನ್ ಡಿಎ ಜೊತೆಗಿನ ಮೈತ್ರಿ ಮುರಿದು ಆರ್ ಜೆಡಿ ಜೊತೆ ಸ್ನೇಹ ಬೆಳೆಸಿ ಮೈತ್ರಿ ಸರಕಾರ ರಚನೆಗೆ ಸಿದ್ಧವಾಗಿರುವ ನಿತೀಶ್ ಕುಮಾರ್ ಅವರ ವಿರುದ್ಧ ಬಿಜೆಪಿ ಅಸಮಾಧಾನ ವ್ಯಕ್ತಪಡಿಸಿದ್ದು, ಜನಾದೇಶವನ್ನು ಅಪಮಾನಿಸಿ ದ್ರೋಹ ಬಗೆದಿದೆ ಎಂದು ಬಿಜೆಪಿ ಹೇಳಿದೆ.
ತೇಜಸ್ವಿ ಯಾದವ್ ವಿರುದ್ಧ ಭ್ರಷ್ಟಾಚಾರ ಆರೋಪದ ಮೇರೆಗೆ 2017ರಲ್ಲಿ ಆರ್ ಜೆಡಿಯೊಂದಿಗೆ ಸಂಬಂಧ ಕಡಿದುಕೊಂಡಿದ್ದ ನಿತೀಶ್ ಕುಮಾರ್, ಮತ್ತೆ ಆ ಪಕ್ಷದೊಂದಿಗೆ ಮೈತ್ರಿಯನ್ನು ಹೇಗೆ ಸಮರ್ಥಿಸಿಕೊಳ್ಳುತ್ತಾರೆ ಎಂದು ಬಿಜೆಪಿ ಮುಖಂಡರು ಪ್ರಶ್ನಿಸಿದ್ದಾರೆ. ನಿತೀಶ್ ಕುಮಾರ್ ಆಗಾಗ್ಗೆ ಪಕ್ಷ ಬದಲಾಯಿಸುವಲ್ಲಿ ನಿಸ್ಸೀಮರು ಎಂದು ವಾಗ್ದಾಳಿ ನಡೆಸಿದ್ದಾರೆ.
1999 ರಿಂದಲೂ ನಿತೀಶ್ ಕುಮಾರ್ ಅವರನ್ನು ಬಿಜೆಪಿ ಬೆಂಬಲಿಸುತ್ತಾ ಬಂದಿದೆ. 2013ರಲ್ಲಿ ಅವರು ಪ್ರಧಾನ ಮಂತ್ರಿ ಆಪೇಕ್ಷೆ ಹೊಂದಿದ್ದರು. ಅದಕ್ಕಾಗಿ ಬಿಜೆಪಿಯಿಂದ ಪ್ರತ್ಯೇಕವಾದರು. ಇದೇ ಕಾರಣದಿಂದ ಈಗ ಮತ್ತೆ ಬಿಜೆಪಿಯೊಂದಿಗಿನ ಮೈತ್ರಿ ಕಡಿದುಕೊಂಡಿದ್ದಾರೆ ಎಂದು ಹೇಳಿದ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ನಿತೀಶ್ ಕುಮಾರ್ ಆಗಾಗ್ಗೆ ಪಕ್ಷ ಬದಲಾಯಿಸುವಲ್ಲಿ ನಿಸ್ಸಿಮ ಎಂದರು.
ನಿತೀಶ್ ಕುಮಾರ್ ಅವಕಾಶವಾದಿ ರಾಜಕಾರಣಿ ಎಂದು ಕೇಂದ್ರ ಸಚಿವ ಅಶ್ವಿನಿ ಚೌಬೆ ಆರೋಪಿಸಿದ್ದಾರೆ. ಅಭಿವೃದ್ಧಿಯಲ್ಲಿ ತೊಡಕನ್ನು ಸೃಷ್ಟಿಸುವ ಮೂಲಕ ಬಿಹಾರಕ್ಕೆ ದ್ರೋಹಕ್ಕೆ ಬಗೆಯುತ್ತಿದ್ದಾರೆ. ಬಿಜೆಪಿ ಯಾರಿಗೂ ದ್ರೋಹ ಮಾಡಲ್ಲ, ಯಾರನ್ನು ಅಡಗಿಸುವುದಿಲ್ಲ, ಬಿಹಾರಕ್ಕೆ ದ್ರೋಹ ಮಾಡುತ್ತಿರುವವರು ಅಭಿವೃದ್ಧಿಯಲ್ಲಿ ತೊಡಕನ್ನು ಸೃಷ್ಟಿಸುತ್ತಿದ್ದಾರೆ. ಅಟಲ್ ಬಿಹಾರಿ ವಾಜಪೇಯಿ ಅವರ ಕಾಲದಿಂದ ಹಿಡಿದು ಮೋದಿ ಸರ್ಕಾರದವರೆಗೂ ಬಿಹಾರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.