ಪಾಟ್ನಾ, ಆ 09 (DaijiworldNews/MS): ಬಿಹಾರದ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಲ್ಲಿಸಿದ್ದಾರೆ. ಈ ಮೂಲಕ ಬಿಜೆಪಿ ಜೊತೆಗಿನ ಮೈತ್ರಿ ಮುರಿದುಕೊಂಡಿದ್ದಾರೆ.
ರಾಜ್ಯಪಾಲ ಫಾಗು ಚೌಹಣ್ ಅವರನ್ನು ಭೇಟಿ ಮಾಡಿ, ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಳಿಕ ಮಾತನಾಡಿ ನಿತೀಶ್ ಕುಮಾರ್" ಎನ್ ಡಿ ಎ ತೊರೆಯಬೇಕು ಎಂದು ಎಲ್ಲಾ ಸಂಸದರು ಮತ್ತು ಶಾಸಕರು ಒಮ್ಮತದ ತೀರ್ಮಾನ ತೆಗೆದುಕೊಂಡ ಬಳಿಕ ರಾಜ್ಯಪಾಲರಿಗೆ ನನ್ನ ರಾಜೀನಾಮೆಯನ್ನು ಸಲ್ಲಿಸಿದ್ದೇನೆ ಅದನ್ನು ಅವರು ಅಂಗೀಕರಿಸಿದ್ದಾರೆ" ಎಂದು ಹೇಳಿದ್ದಾರೆ.
ಇನ್ನೂ ಇಂದು ಬೆಳಗ್ಗೆ ಸಭೆ ನಡೆಸಿದ ಜೆಡಿಯೂನ ಎಲ್ಲಾ ಶಾಸಕರು ಮತ್ತು ಸಂಸದರು ನಿತೀಶ್ ತೆಗೆದುಕೊಳ್ಳುವ ನಿರ್ಧಾರಗಳಿಗೆ ತಾವೆಲ್ಲರೂ ಬದ್ದವಾಗಿದ್ದೇವೆ ಎಂದು ತಿಳಿಸಿದ್ದಾರೆ.
ಬಿಜೆಪಿ ಮತ್ತು ಜೆಡಿಯು ಮಧ್ಯೆ ಸಂಬಂಧ ಹಳಸಿದ ಬೆನ್ನಲ್ಲೇ ಬಿಹಾರ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣಗಳು ಮುನ್ನೆಲೆಗೆ ಬಂದಿದ್ದು ಮಹಾಘಟಬಂಧನಕ್ಕೆ ಒಲವು ತೋರಿರುವ ನಿತೇಶ್ ಮುಂದಿನ ನಡೆ ಕುತೂಹಲಕಾರಿಯಾಗಿದೆ.