ಬೆಂಗಳೂರು, ಆ 09 (DaijiworldNews/MS): ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಬದಲಾವಣೆ ಮಾಡುವ ಸಾಧ್ಯತೆಗಳಿವೆ. ಈ ಬಗ್ಗೆ ವರಿಷ್ಠರು ಚಿಂತನೆ ನಡೆಸಿದ್ದಾರೆ ಎಂದು ಬಿಜೆಪಿ ಮಾಜಿ ಶಾಸಕ ಸುರೇಶ್ಗೌಡ ಸೋಮವಾರ ಹೇಳಿದ ಬೆನ್ನಲ್ಲೇ ಕಾಂಗ್ರೆಸ್ , ಪಪ್ಪೆಟ್ ಸಿಎಂ ಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಹೈಕಮಾಂಡ್ ಎಂದು ವ್ಯಂಗ್ಯವಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕಾಂಗ್ರೆಸ್ , "ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಬಸವರಾಜ್ ಬೊಮ್ಮಾಯಿ ಅವರನ್ನ ಕೇಶವ ಕೃಪಾದವರು 'ಸಂಘಪರಿವಾರಿ'ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ! ಆಡಿಸಿ ನೋಡು ಎಂದು ಗೊಂಬೆಯಂತಿದ್ದ ಪಪ್ಪೆಟ್ ಸಿಎಂಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಹೈಕಮಾಂಡ್! ಈ ಬದಲಾವಣೆ ಯತ್ನ ಸರ್ಕಾರದ ವೈಫಲ್ಯಕ್ಕೋ, 3 ಸಿಎಂ ಎಂಬ ನಿಮ್ಮ ಸಂಪ್ರದಾಯಕ್ಕೋ" ಎಂದು ಪ್ರಶ್ನಿಸಿದೆ.
ಮತ್ತೊಂದು ಟ್ವೀಟ್ ನಲ್ಲಿ, "ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ! 40% ಸರ್ಕಾರದಲ್ಲಿ '3ನೇ ಸಿಎಂ' ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ! ಸಿಎಂ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ.ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ" ಎಂದು ಲೇವಡಿ ಮಾಡಿದೆ.