ಮೈಸೂರು, ಆ 09 (DaijiworldNews/MS): ಜೆಡಿಎಸ್ನಿಂದ ಬಿಜೆಪಿಗೆ ಹಾರಿದ ಹಳ್ಳಿಹಕ್ಕಿ, ಸಮಿಶ್ರ ಸರ್ಕಾರ ಕೆಡವುವಲ್ಲಿ ಮಹತ್ವದ ಪಾತ್ರವಹಿಸಿ ಬಿಜೆಪಿ ಸೇರಿದ್ದ ಹೆಚ್. ವಿಶ್ವನಾಥ್ ಅವರ ಪುತ್ರ ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.
ವಿಶ್ವನಾಥ್ ಪುತ್ರ ಪೂರ್ವಜ್ ವಿಶ್ವನಾಥ್ ಅವರೇ ಈ ವಿಚಾರವನ್ನು ಧೃಡಪಡಿಸಿದ್ದು, "ಶೀಘ್ರದಲ್ಲೇ ಕಾಂಗ್ರೆಸ್ ಸೇರಲಿದ್ದೇನೆ" ಎಂದು ಹೇಳಿದ್ದಾರೆ.
ನಂಜನಗೂಡು ತಾಲ್ಲೂಕು ತಗಡೂರಿನಲ್ಲಿ ಕಾಂಗ್ರೆಸ್ನಿಂದ ಆಯೋಜಿಸಿದ್ದ 'ಸ್ವಾತಂತ್ರ್ಯ ನಡಿಗೆ' ಕಾರ್ಯಕ್ರಮದಲ್ಲಿ ಸೋಮವಾರ ಪಾಲ್ಗೊಂಡಿದ್ದ ವೇಳೆ ಪತ್ರಕರ್ತರೊಂದಿಗೆ ಮಾತನಾಡಿ ಅವರು, 'ಪಕ್ಷ ಸೇರುವ ಬಗ್ಗೆ ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ. ಈ ಬಗ್ಗೆ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ತಂದೆ ವಿಶ್ವನಾಥ್ ಅವರಿಗೂ ತಿಳಿಸಿದ್ದೇನೆ. ಅವರು ನಿನ್ನಿಷ್ಟ ಎಂದಿದ್ದಾರೆ. ಹೀಗಾಗಿ ಕಾಂಗ್ರೆಸ್ಗೆ ಸೇರ್ಪಡೆ ಆಗುತ್ತಿರುವೆ" ಎಂದು ಸ್ಪಷ್ಟಪಡಿಸಿದ್ದಾರೆ.
ಬಿಜೆಪಿಯಲ್ಲಿ ಸಚಿವ ಸ್ಥಾನ ಆಕಾಂಕ್ಷಿಯಾಗಿರುವ ಹೆಚ್ ವಿಶ್ವನಾಥ್ ಬಾಯ್ಬಿಟ್ರೆ ಕಾಂಗ್ರೆಸ್ ಬಗ್ಗೆ ಕಿಡಿಕಾರುತ್ತಿರುತ್ತಾರೆ. ಇದೀಗ ಮಗನಿಗೆ ಕಾಂಗ್ರೆಸ್ ಪಕ್ಷ ಸೇರಲು ಗ್ರೀನ್ ಸಿಗ್ನಲ್ ಕೊಟ್ಟಿರುವುದು , ಅಪ್ಪ-ಮಗನ ಹೊಸ ಆಟವೇನಾದರೂ ಆರಂಭವಾಗಿದೆಯೇ ಎಂದು ರಾಜಕೀಯ ವಲಯದಲ್ಲಿ ಬಿಸಿ ಬಿಸಿ ಚರ್ಚೆಯಾಗುತ್ತಿದೆ.