ಬೆಂಗಳೂರು, ಆ 09 (DaijiworldNews/HR): ತ್ರಿವರ್ಣ ಧ್ವಜವನ್ನು ಹಿಡಿಯಲು ನಮಗಿರುವಷ್ಟು ಹಕ್ಕು ಬೇರೆಯವರಿಗಿಲ್ಲ. ನಾವು ಗಾಂಧೀಜಿ ಅವರ ಸಂಸ್ಕೃತಿ, ನೆಹರೂ ಅವರ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಈಗಿನ ಯಾವುದೇ ಕಾಂಗ್ರೆಸ್ ನಾಯಕರು ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿರಲಿಲ್ಲ. ಈಗ ಲೂಟಿ ಮಾಡುವವರು ಇದ್ದಾರೆ ಎಂದಿದ್ದ ಹೆಚ್ ಡಿಕೆ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, ಅವರು ಏನಾದರೂ ಹೇಳಲಿ, ನಾವು ಗಾಂಧೀಜಿ ಅವರ ಸಂಸ್ಕೃತಿ, ನೆಹರೂ ಅವರ ಸಂಪ್ರದಾಯ ಪಾಲಿಸಿಕೊಂಡು ಬರುತ್ತಿದ್ದೇವೆ. ಈ ಧ್ವಜವನ್ನು ಹಿಡಿಯಲು ನಮಗಿರುವಷ್ಟು ಹಕ್ಕು ಬೇರೆಯವರಿಗಿಲ್ಲ ಎಂದರು.
ಇನ್ನು ಆ.15 ರಂದು 1 ಲಕ್ಷ ಜನ ರಾಷ್ಟ್ರಧ್ವಜ ಹಿಡಿದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೂ ಪಾದಯಾತ್ರೆ ಮಾಡಲಾಗುವುದು. ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಎಲ್ಲ ವರ್ಗದ ಜನರು ಕುಟುಂಬ ಹಾಗೂ ಸ್ನೋಹಿತರ ಸಮೇತ ಭಾಗವಹಿಸಬಹುದು. ಜನರಿಗೆ ಅನುಕೂಲವಾಗುವಂತೆ ರೈಲ್ವೇ, ಬಸ್ ಹಾಗೂ ಮೆಟ್ರೋ ನಿಲ್ದಾಣದ ಬಳಿ ಇರುವ ಕೇಂದ್ರಗಳನ್ನೇ ಈ ಕಾರ್ಯಕ್ರಮಕ್ಕೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮೆಟ್ರೋ ಪ್ರಯಾಣಿಕರಿಗೆ ಶೇ.50ರಷ್ಟು ರಿಯಾಯಿತಿ ನೀಡಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ಮೆಟ್ರೋ ವ್ಯವಸ್ಥಾಪಕ ನಿರ್ದೇಶಕರ ಬಳಿ ಮನವಿ ಮಾಡುತ್ತೇನೆ ಎಂದರು.
ಈ ಕಾರ್ಯಕ್ರಮಕ್ಕೆ ಎಐಸಿಸಿ ನಾಯಕರು ಬರುತ್ತಿದ್ದು, ಯಾರು ಬರಲಿದ್ದಾರೆ ಎಂದು ಅವರೇ ಘೋಷಣೆ ಮಾಡಲಿದ್ದಾರೆ ಎಂದು ಹೇಳಿದ್ದಾರೆ.