ಉತ್ತರ ಪ್ರದೇಶ, ಆ 08 (DaijiworldNews/DB): ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ರೈಲ್ವೇ ಪ್ಯಾಂಟ್ರಿ ಸಿಬಂದಿ ಆತನನ್ನು ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಎಸೆದಿರುವ ಘಟನೆ ಉತ್ತರ ಪ್ರದೇಶದ ಝಾನ್ಸಿಯ ಲಲಿತ್ಪುರ ಜಿಲ್ಲೆಯಲ್ಲಿ ನಡೆದಿದೆ. ಘಟನೆ ಸಂಬಂಧ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಅಮಿತ್ ಎಂದು ಗುರುತಿಸಲಾಗಿದೆ. ರವಿ ಯಾದವ್ (26) ತನ್ನ ಸೋದರಿಯೊಂದಿಗೆ ರಪ್ತಿಸಾಗರ್ ಎಕ್ಸ್ಪ್ರೆಸ್(12591) ರೈಲಿನಲ್ಲಿ ಪ್ರಯಾಣಿಸುತ್ತಿದ್ದರು. ರೈಲು ಜಿರೋಲಿ ಗ್ರಾಮದ ಬಳಿ ತಲುಪಿದಾಗ, ನೀರಿನ ಬಾಟಲಿಯನ್ನು ಖರೀದಿಸುವ ಮತ್ತು ಪಾನ್ ಮಸಾಲ ಉಗುಳುವ ವಿಚಾರವಾಗಿ ರವಿ ಮತ್ತು ಪ್ಯಾಂಟ್ರಿ ಸಿಬಂದಿ ನಡುವೆ ಮಾತಿನ ಚಕಮಕಿ ನಡೆದಿದೆ. ಬಳಿಕ ರವಿ ಯಾದವ್ ಸೋದರಿ ಲಲಿತ್ಪುರ ನಿಲ್ದಾಣದಲ್ಲಿ ರೈಲಿನಿಂದ ಇಳಿದಿದ್ದು, ರವಿಯನ್ನು ಪ್ಯಾಂಟ್ರಿ ಸಿಬಂದಿ ಇಳಿಯಲು ಬಿಟ್ಟಿಲ್ಲ. ಬಳಿಕ ರೈಲಿನಲ್ಲೇ ಆತನನ್ನು ಥಳಿಸಿ ಚಲಿಸುತ್ತಿದ್ದ ರೈಲಿನಿಂದ ಮತ್ತೊಂದು ಟ್ರ್ಯಾಕ್ಗೆ ಎಸೆದಿದ್ದಾರೆ. ಗಾಯಗೊಂಡ ರವಿಯನ್ನು ಸ್ಥಳೀಯರುಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಝಾನ್ಸಿ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದ್ದು, ಆತ ಅಪಾಯದಿಂದ ಪಾರಾಗಿದ್ದಾರೆ ಎಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ಘಟನೆ ಸಂಬಂಧ ರವಿ ಯಾದವ್ ಪ್ಯಾಂಟ್ರಿ ಸಿಬಂದಿ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 323 (ಉದ್ದೇಶಪೂರ್ವಕವಾಗಿ ನೋವುಂಟು ಮಾಡುವುದು), 325 (ಘೋರವಾದ ಗಾಯವನ್ನುಂಟು ಮಾಡುವುದು) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ ಸರ್ಕಲ್ ಅಧಿಕಾರಿ ಮೊಹಮ್ಮದ್ ನಯೀಮ್ ತಿಳಿಸಿದ್ದಾರೆ. ಓರ್ವನನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದು, ಉಳಿದವರ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.