ಬೆಂಗಳೂರು, ಆ 08 (DaijiworldNews/DB): ಸ್ವಾತಂತ್ರ್ಯ ಅಮೃತಮಹೋತ್ಸವ ಹಿನ್ನೆಲೆಯಲ್ಲಿ ಆ.15 ರಂದು 1 ಲಕ್ಷ ಮಂದಿ ರಾಷ್ಟ್ರಧ್ವಜ ಹಿಡಿದು ಸಂಗೊಳ್ಳಿ ರಾಯಣ್ಣ ವೃತ್ತದಿಂದ ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದವರೆಗೆ ಪಾದಯಾತ್ರೆ ಮಾಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಇಂದು ಈ ವಿಷಯ ತಿಳಿಸಿದ ಅವರು, ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದು, ಕುಟುಂಬ ಸಮೇತ ಎಲ್ಲರೂ ಭಾಗವಹಿಸಬಹುದು. ಇದಲ್ಲದೆ ಪ್ರತಿ ಜಿಲ್ಲೆಯಲ್ಲಿ 75 ಕಿ.ಮೀ ನಷ್ಟು ದೂರ ಪಾದಯಾತ್ರೆ ಹಮ್ಮಿಕೊಳ್ಳುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ವವನ್ನು ಅರ್ಥಪೂರ್ಣವಾಗಿಸಲು ತೀರ್ಮಾನಿಸಲಾಗಿದೆ. ಗಾಂಧೀಜಿಯವರು ನೀಡಿದ ಮಾರ್ಗದರ್ಶನ, ನಮ್ಮ ದೇಶದ ಗೌರವ, ಸ್ವಾಭಿಮಾನ ಪ್ರತೀಕವಾಗಿರುವ ಪಾದಯಾತ್ರೆ ಇದಾಗಿದೆ ಎಂದರು.
ಆ.15 ರಂದು ಹೊಸ ಇತಿಹಾಸ ಸೃಷ್ಟಿಯಾಗುತ್ತದೆ. ಐತಿಹಾಸಿಕ ಕಾರ್ಯಕ್ರಮದಲ್ಲಿ ಎಲ್ಲರೂ ಭಾಗವಹಿಸಬೇಕು. ಪಾದಯಾತ್ರೆ ಬಳಿಕ ಸಂಜೆ ನ್ಯಾಷನಲ್ ಕಾಲೇಜು ಮೈದಾನದಲ್ಲಿ ಹರಿಹರನ್ ಅವರ ತಂಡದಿಂದ ದೇಶಭಕ್ತಿ ಕುರಿತ ಸಾಂಸ್ಕೃತಿಕ ಕಾರ್ಯಕ್ರಮ ಜರಗಲಿದೆ. ಎಐಸಿಸಿ ನಾಯಕರು ಕೂಡಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಕಾಂಗ್ರೆಸ್ ಅಧಿಕಾರ ಪಡೆಯುವ ಆಸೆಯಿಂದ ಈ ಕಾರ್ಯಕ್ರಮ ಮಾಡುತ್ತಿದೆ ಎಂದು ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ ಅವರು, ದೇಶಕ್ಕೆ ಸಂವಿಧಾನ, ರಾಷ್ಟ್ರಧ್ವಜ, ರಾಷ್ಟ್ರಗೀತೆ, ಪ್ರಜಾಪ್ರಭುತ್ವ ವ್ಯವಸ್ಥೆ ಎಲ್ಲವನ್ನೂ ತಂದು ಕೊಟ್ಟಿರುವುದು ಕಾಂಗ್ರೆಸ್. ಪ್ರಜಾಪ್ರಭುತ್ವ ವ್ಯವಸ್ಥೆಯೇ ಇಲ್ಲದಿರುತ್ತಿದ್ದರೆ ಕುಮಾರಸ್ವಾಮಿ, ಯಡಿಯೂರಪ್ಪ, ನರೇಂದ್ರ ಮೋದಿ ಸೇರಿದಂತೆ ಯಾರೂ ಅಧಿಕಾರಕ್ಕೆ ಬರಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ನಾವು ಗಾಂಧಿ, ನೆಹರೂ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ. ಧ್ವಜ ಹಿಡಿಯಲು ನಮಗಿರುವಷ್ಟು ಹಕ್ಕು ಬೇರೆಯವರಿಗಿಲ್ಲ. ಅವರು ಏನೇ ಹೇಳಿದರೂ ನಮಗೇನು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.