ಶಿವಮೊಗ್ಗ, ಆ 08 (DaijiworldNews/DB): ಅಧಿಕಾರ ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲ ಸಿದ್ದರಾಮಯ್ಯ ಹರಿದಾಡಿದ್ದಾರೆ. ಸಮಾಜವಾದಿ ಪಕ್ಷ, ಸ್ವಂತ ಪಕ್ಷ ಇನ್ನೂ ಹಲವು ಕಡೆ ಅವರ ಅಧಿಕಾರದ ಪಯಣ ಸಾಗಿದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುರ್ತು ಪರಿಸ್ಥಿತಿ ಸಮಯದಲ್ಲಿ ಕಾಂಗ್ರೆಸ್ಸನ್ನು ವಿರೋಧಿಸಿದ್ದ ಸಿದ್ದರಾಮಯ್ಯ ಇಂದಿರಾಗಾಂಧಿಗೆ ಧಿಕ್ಕಾರ ಕೂಗಿ ಜೈಲುಪಾಲಾಗಿದ್ದರು. ಆನಂತರವೂ ಅವರಿಗೆ ರಾಷ್ಟ್ರದ ಬಗ್ಗೆ ಯಾವುದೇ ಕಲ್ಪನೆ ಇರಲಿಲ್ಲ. ಅಧಿಕಾರ ಎಲ್ಲೆಲ್ಲಿ ಸಿಗುತ್ತದೋ ಅಲ್ಲೆಲ್ಲ ಹರಿದಾಡುವುದು ಅವರ ರೂಢಿಯಾಗಿತ್ತು ಎಂದರು.
ದಾವಣಗೆರೆಯಲ್ಲಿ ಜನ ಸೇರಿದರೆಂದ ಮಾತ್ರಕ್ಕೆ ಅಧಿಕಾರಕ್ಕೆ ಬರುತ್ತೇವೆಂದು ಕನಸು ಕಾಣುವುದು ಅವರ ಭ್ರಮೆಯಷ್ಟೇ. ಶಿವಮೊಗ್ಗದಲ್ಲಿ ನಡೆದ ಬೈಕ್ ರ್ಯಾಲಿಯೇ ಅವರ ಈ ಕನಸಿಗೆ ಉತ್ತರ ನೀಡುತ್ತದೆ. ಲೋಕಸಭೆ, ವಿಧಾನಸಭೆ ಸೇರಿದಂತೆ ಎಲ್ಲಾ ಚುನಾವಣೆಗಳಲ್ಲಿಯೂ ಮುಂದೆ ಬಿಜೆಪಿಯೇ ಜಯಗಳಿಸಲಿದ್ದು, ಕಾಂಗ್ರೆಸ್ಗೆ ಠೇವಣಿ ಸಿಗುವುದೂ ಅನುಮಾನ. ವಿಪಕ್ಷ ಸ್ಥಾನವನ್ನೂ ಕಳೆದುಕೊಳ್ಳಲಿದ್ದಾರೆ ಎಂದವರು ತಿಳಿಸಿದರು.
ಬಿಜೆಪಿ, ಆರೆಸ್ಸೆಸ್ ಕಚೇರಿ ಮೇಲೆ ಧ್ವಜ ಹಾರಿಸಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಸ್ವಾತಂತ್ರ್ಯ ಕ್ಕೂ ಸಿದ್ದರಾಮಯ್ಯನವರಿಗೂ ಏನು ಸಂಬಂಧ? ರಾಷ್ಟ್ರಭಕ್ತರ ಪ್ರಯತ್ನದಿಂದ ದೇಶ ಸ್ವಾತಂತ್ರ್ಯ ಗಳಿಸಿದೆ. ಆಗ ಸಿದ್ದರಾಮಯ್ಯ ಹುಟ್ಟಿಯೇ ಇರಲಿಲ್ಲ. ಎಲ್ಲೆಲ್ಲಿ ರಾಷ್ಟ್ರಧ್ವಜ ಹಾರಿಸಬೇಕು ಎಂಬುದನ್ನು ಅವರಲ್ಲಿ ಕೇಳಿ ಮಾಡಬೇಕೆಂದಿಲ್ಲ. ಯಾಕೆಂದರೆ ಅವರಂತೆ ಅಧಿಕಾರಕ್ಕಾಗಿ ರಾಷ್ಟ್ರಧ್ವಜ ಬಳಕೆ ಮಾಡುವವರು ನಾವಲ್ಲ ಎಂದರು.
ಡಿ.ಕೆ. ಶಿವಕುಮಾರ್ ಮೊಸರಲ್ಲಿ ಕಲ್ಲು ಹುಡುಕುವ ವ್ಯಕ್ತಿಯಾದ್ದರಿಂದ ರಾಷ್ಟ್ರಧ್ವಜದ ವಿಚಾರದಲ್ಲಿಯೂ ಹಾಗೆಯೇ ಮಾಡುತ್ತಾರೆ. ಆದರೆ ರಾಷ್ಟ್ರಧ್ವಜದ ವಿಚಾರಲ್ಲಿಯೂ ರಾಜಕಾರಣ ಮಾಡುವ ಅವರ ರಾಷ್ಟ್ರಪ್ರೇಮ ಎಂತಹುದು ಎಂಬುದು ತಿಳಿಯುತ್ತದೆ ಎಂದು ಪ್ರಶ್ನೆಯೊಂದಕ್ಕೆ ಈಶ್ವರಪ್ಪ ಪ್ರತಿಕ್ರಿಯಿಸಿದರು.
ಸಾವಿರಾರು ಕೋಟಿ ರೂ. ಭ್ರಷ್ಟಾಚಾರ ಎಸಗಿ ತಿಹಾರ್ ಜೈಲಿಗೆ ಹೋಗಿ ಜಾಮೀನಿನ ಮೇಲೆ ಹೊರ ಬಂದಿರುವ ಡಿ.ಕೆ. ಶಿವಕುಮಾರ್ ಅವರಿಗೆ ಭ್ರಷ್ಟಾಚಾರ, ಪ್ರವಾಹದ ಕುರಿತು ಮಾತನಾಡುವ ಅಧಿಕಾರ ಇಲ್ಲ. ಡಿಕೆಶಿ ಮತ್ತು ಸಿದ್ದರಾಮಯ್ಯನವರಿಗೆ ಸರ್ಕಾರದ ಬಗ್ಗೆ ಟೀಕೆ ಮಾಡುವುದೊಂದೇ ಗೊತ್ತು, ಒಳ್ಳೆಯ ಕೆಲಸಗಳ ಬಗ್ಗೆ ಮಾತನಾಡಿಯೇ ಗೊತ್ತಿಲ್ಲ ಎಂದು ಇದೇ ವೇಳೆ ಕಿಡಿ ಕಾರಿದರು.