ನವದೆಹಲಿ, ಆ 08 (DaijiworldNews/DB): ಭಯೋತ್ಪಾದನಾ ಸಂಘಟನೆಗಳಿಗೆ ಹಣಕಾಸು ಸಂಗ್ರಹಿಸಿ ನೀಡಿದ ಆರೋಪದ ಮೇಲೆ ಎನ್ಐಎಯಿಂದ ಶನಿವಾರ ಬಂಧಿತನಾಗಿರುವ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ವಿದ್ಯಾರ್ಥಿ ಮೊಹ್ಸಿನ್ ಅಹ್ಮದ್ನನ್ನು ಆಗಸ್ಟ್ 16 ರವರೆಗೆ ರಾಷ್ಟ್ರೀಯ ತನಿಖಾ ಸಂಸ್ಥೆಯ ಕಸ್ಟಡಿಗೆ ಒಪ್ಪಿಸಲಾಗಿದೆ.
ಬಂಧಿತ ಮೊಹ್ಸಿನ್ ಅಹ್ಮದ್ನನ್ನು ಇಂದು ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇದೀಗ ನ್ಯಾಯಾಲಯವು ಆತನನ್ನು ಆಗಸ್ಟ್ 16 ರವರೆಗೆ ಎನ್ಐಎ ಕಸ್ಟಡಿಗೆ ಒಪ್ಪಿಸಿದೆ. ಪಾಟ್ನಾ ಮೂಲದ ಐಸಿಸ್ನ ತೀವ್ರಗಾಮಿ ಮತ್ತು ಸಕ್ರಿಯ ಸದಸ್ಯ ಹಾಗೂ ಭಾರತ ಮತ್ತು ವಿದೇಶಗಳಲ್ಲಿ ಐಸಿಸ್ ಪರ ಸಹಾನುಭೂತಿಯುಳ್ಳವರಿಂದ ನಗದು ಸಂಗ್ರಹದಲ್ಲಿ ಭಾಗಿಯಾಗಿದ್ದ ಆರೋಪದ ಮೇಲೆ ಅಹ್ಮದ್ನನ್ನು ದೆಹಲಿಯ ಬಾಟ್ಲಾ ಹೌಸ್ನಲ್ಲಿರುವ ಆತನ ನಿವಾಸದಲ್ಲಿ ಬಂಧಿಸಲಾಗಿತ್ತು. ಐಸಿಸ್ ಚಟುವಟಿಕೆ ಬೆಳೆಸಲು ಈತ ಸಿರಿಯಾ ಮತ್ತು ಇತರೆಡೆಗಳಿಗೆ ಕ್ರಿಪ್ಟೋಕರೆನ್ಸಿ ರೂಪದಲ್ಲಿ ಕಳುಹಿಸುತ್ತಿದ್ದ ಆರೋಪವೂ ಆತನ ಮೇಲಿತ್ತು.
ಆರೋಪ ಸುಳ್ಳು
ಆದರೆ ಮೊಹ್ಸಿನ್ ಅಹ್ಮದ್ ಮೇಲಿರುವ ಆರೋಪವನ್ನು ಆತನ ಕುಟುಂಬ ಸದಸ್ಯರು ತಳ್ಳಿ ಹಾಕಿದ್ದಾರೆ. ಪಾಟ್ನಾದಿಂದ ಸೋಮವಾರ ಬೆಳಗ್ಗೆ ದೆಹಲಿಗೆ ಆಗಮಿಸಿರುವ ಮೊಹ್ಸಿನ್ನ ಮೂವರು ಸಹೋದರಿಯರು ಹಾಗೂ ರೈಲ್ವೇ ಇಲಾಖೆಯ ಉದ್ಯೋಗಿಯಾಗಿರುವ ತಂದೆ, ಆತನ ಮೇಲಿನ ಆರೋಪ ಸತ್ಯಕ್ಕೆ ದೂರವಾದುದು. ಆತ ನ್ಯಾಯಾಲಯದಲ್ಲಿ ಜಯ ಪಡೆಯುತ್ತಾನೆ ಎಂದಿದ್ದಾರೆ.
ಒಂದು ವೇಳೆ ಆತನ ಹಣ ಸಂಗ್ರಹಿಸುತ್ತಿದ್ದರೆ ಆತನಲ್ಲಿ ಸಾಕಷ್ಟು ಹಣ ಇರಬೇಕಿತ್ತು. ಆದರೆ ಕೆಲ ದಿನಗಳ ಹಿಂದಷ್ಟೇ ಕೋಡಿಂಗ್ ಕೋರ್ಸ್ಗಾಗಿ 4,000 ರೂ. ಬೇಕೆಂದು ಆತ ನನಗೆ ಸಂದೇಶ ಕಳುಹಿಸಿದ್ದ. ಅಲ್ಲದೆ ಆತ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದ. ಕೊರೊನಾ ಲಾಕ್ಡೌನ್ ಸಂದರ್ಭದಲ್ಲಿ ದೇಣಿಗೆ ಸಂಗ್ರಹಿಸಿ ಬಡವರಿಗೆ ಆಹಾರ ವಿತರಣೆ ಮಾಡುತ್ತಿದ್ದ ಎಂದು ಆತನ ಸಹೋದರಿಯೊಬ್ಬರು ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾರೆ.
ಮೊಹ್ಸಿನ್ ಮೇಲಿರುವ ಆರೋಪಗಳು ಸುಳ್ಳು. ಅವನಿಗೆ ಐಸಿಸ್ ಎಂದರೆ ಏನೆಂದೇ ಗೊತ್ತಿರದು. ಎಂಜಿನಿಯರಿಂಗ್ ಪ್ರವೇಶ ಪಡೆಯಲು ಎರಡು ಬಾರಿ ಪ್ರಯತ್ನಿಸಿ ಯಶಸ್ವಿಯಾಗಿದ್ದ. ಆತನ ಮೇಲಿರುವ ಆರೋಪ ಸುಳ್ಳು ಎಂಬುದನ್ನು ನಾವು ನ್ಯಾಯಾಲಯದಲ್ಲಿ ಸಾಬೀತುಪಡಿಸುತ್ತೇವೆ ಎಂದವರು ತಿಳಿಸಿದರು.